ಕಳೆದ ಐದು ವರ್ಷಗಳಿಂದ ರಾಜ್ಯಾದ್ಯಂತ ಹಲವಾರು ಜನಜಾಗೃತಿ ಕಾರ್‍ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಎಂಬ ವೈಚಾರಿಕ ಚಳುವಳಿಯು ಇದೀಗ ಸಂಘಟನೆಯ ರೂಪ ಪಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತೀ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಮಾನವ ಬಂಧುತ್ವ ವೇದಿಕೆಯ ಘಟಕಗಳನ್ನು ಸ್ಥಾಪಿಸಿ ವೈಚಾರಿಕ ಆಂದೋಲನ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆ ಕರ್ನಾಟಕದ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಹೇಳಿದ್ದಾರೆ.
ಭಾನುವಾರ ಬಿ.ಸಿ.ರೋಡಿನಲ್ಲಿ ನಡೆದ ಮಾನವ ಬಂಧುತ್ವ ವೇದಿಕೆಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನ ಮತ್ತು ಮಾನವೀಯ ಮೌಲ್ಯಗಳ ಉಳಿವಿಗಾಗಿ ಆಂದೋಲನ ನಡೆಸುತ್ತಿರುವ ಮಾನವ ಬಂಧುತ್ವ ವೇದಿಕೆಯ ಚಳವಳಿಯಲ್ಲಿ ಈಗಾಗಲೇ ಸಹಸ್ರಾರು ಮಂದಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಡಿಸೆಂಬರ್ ಒಳಗೆ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ವೇದಿಕೆಯ ಸದಸ್ಯರನ್ನಾಗಿಸುವ ಗುರಿ ಇರಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮಾನವ ಬಂಧುತ್ವ ವೇದಿಕೆಯ ಮಹಿಳಾ ಮತ್ತು ವಿದ್ಯಾರ್ಥಿ ವಿಭಾಗವು ಅಸ್ಥಿತ್ವಕ್ಕೆ ಬರಲಿದೆ. ಮಾನವೀಯತೆಯನ್ನು ಒಪ್ಪುವ ಸಮಾನಮನಸ್ಕ ಸ್ನೇಹಿತರು ವೇದಿಕೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ವಿಲ್ಫ್ರೆಡ್ ಡಿಸೋಜ ಹೇಳಿದರು.
ಮಾನವ ಬಂಧುತ್ವ ವೇದಿಕೆ ಕರ್ನಾಟಕದ ಬಂಟ್ವಾಳ ತಾಲೂಕು ಸಂಚಾಲಕ ಗೋಪಾಲ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ಮಾನವ ಬಂಧುತ್ವ ವೇದಿಕೆಯಡಿ ಬಂಟ್ವಾಳ ತಾಲೂಕಿನಲ್ಲಿ ಅನೇಕ ಜನಜಾಗೃತಿ ಕಾರ್‍ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗಿದೆ. ಸಮಾನ ಮನಸ್ಕ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿದೆ. ಇತ್ತೀಚೆಗೆ ಸಂವಿಧಾನ ಆಂದೋಲನ ಕಾರ್‍ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿದೆ. ಇದೀಗ ಈ ಚಳುವಳಿಗೆ ತಾಲೂಕಿನಲ್ಲಿ ಸಂಘಟನೆಯ ಸ್ವರೂಪ ನೀಡಲಾಗುತ್ತಿದೆ ಎಂದರು.
ಸಂವಿಧಾನ ಆಂದೋಲನ ಸ್ವಾಗತ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಎಸ್. ಕಡೇಶಿವಾಲಯ ಸ್ವಾಗತಿಸಿದರು. ಪ್ರೇಮನಾಥ್ ಕೆ. ವಂದಿಸಿದರು.
ತಾಲೂಕು ಸಮಿತಿ ರಚನೆ:
ಇದೇ ವೇಳೆ ಮಾನವ ಬಂಧುತ್ವ ವೇದಿಕೆ ಕರ್ನಾಟಕ-ಬಂಟ್ವಾಳ ತಾಲೂಕು ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಯುವ ಸಂಘಟಕ, ಸಾಮಾಜಿಕ ಕಾರ್‍ಯಕರ್ತ ವಿಜಯ ಕುಮಾರ್ ಎಸ್.ಕಡೇಶಿವಾಲಯ ಆಯ್ಕೆಯಾದರು. ವಿಜಯ ಕುಮಾರ್ ಅವರು ರೋಟರಿ ಸೇವಾ ದಳ, ಕೃಷ್ಣ ಜನ್ಮಾಷ್ಠಮಿ ಸಮಿತಿ, ಶ್ರೀ ಗಣೇಶೋತ್ಸವ ಸಮಿತಿ ಸಹಿತ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಎಚ್ಕೆ.ನಯನಾಡು, ಲೋಕೇಶ್ ಸುವರ್ಣ ಅಲೆತ್ತೂರು, ಮಹಮ್ಮದ್ ತೌಶಿಫ್, ಪ್ರಧಾನ ಕಾರ್‍ಯದರ್ಶಿಯಾಗಿ ಪ್ರೇಮನಾಥ್ ಕೆ., ಕೋಶಾಧಿಕಾರಿಯಾಗಿ ಜನಾರ್ಧನ ಬೋಳಂತೂರು, ಜತೆ ಕಾರ್‍ಯದರ್ಶಿಗಳಾಗಿ ಸತೀಶ್ ಪೂಜಾರಿ ಬಾಯಿಲ, ಉಬೈದ್ ಕೆ. ಹಾಗೂ ಕಾರ್‍ಯಕಾರಿ ಮಂಡಳಿ ಸದಸ್ಯರಾಗಿ ಎ.ಗೋಪಾಲ ಅಂಚನ್, ಸುಂದರ ಅನಂತಾಡಿ, ರಾಜಾ ಚೆಂಡ್ತಿಮಾರು, ಶರೀಫ್ ಫರ್ಲಿಯ, ಪ್ರಭಾಕರ ದೈವಗುಡ್ಡೆ ಅವರನ್ನು ಆರಿಸಲಾಯಿತು.