ಕಲ್ಲಡ್ಕದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತವೃಂದ ಮತ್ತು ಶ್ರೀರಾಮ ಮಂದಿರ ಕಲ್ಲಡ್ಕ ಹಾಗೂ ನಾನಾ ಹಿಂದು ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಸಂಜೆ ಕಲ್ಲಡ್ಕ ಶ್ರೀರಾಮ ಮಂದಿರದ ಮುಂಭಾಗ ಶ್ರೀ ಅಯ್ಯಪ್ಪ ಸ್ವಾಮಿಯ ಶಬರಿಮಲೆ ಕ್ಷೇತ್ರ ಉಳಿಸಿ ಹೋರಾಟದ ಅಂಗವಾಗಿ ಭಜನೆ, ಪ್ರತಿಭಟನಾ ಸಭೆ ನಡೆಯಿತು.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಬರಿಮಲೆಯ ಸಾನಿಧ್ಯದ ಪಾವಿತ್ರ್ಯತೆಗೆ ಧಕ್ಕೆಯಾಗುವ ಸನ್ನಿವೇಶ ಒದಗಿಬಂದಿದ್ದು ದೇಶಾದ್ಯಂತ ಇರುವ ಕೋಟ್ಯಾಂತರ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ಭಾವನೆಗಳಿಗೆ ತೀವ್ರ ಘಾಸಿ ಉಂಟಾಗಿದೆ. ತೀರ್ಪನ್ನು ಯಥಾವತ್ತಾಗಿ ಪಾಲಿಸುವ ಕೇರಳ ಸರಕಾರದ ಧೋರಣೆ ಗಾಯದ ಮೇಲೆ ಬರೆ ಎಳೆದಂತೆ ವೇದನೆ ಉಂಟುಮಾಡಿದ್ದು, ಭಜನೆ ಮತ್ತು ಸತ್ಯಾಗ್ರಹದ ಮೂಲಕ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮನವಿಗೆ ಸ್ಪಂದಿಸದೇ ಇದ್ದಲ್ಲಿ ತೀವ್ರ ಹೋರಾಟ ಮಾಡಬೇಕಾದೀತು ಎಂದು ಸಭೆ ಎಚ್ಚರಿಕೆ ನೀಡಿದೆ. ಈ ಕುರಿತು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ತೀರ್ಮಾನಿಸಿತು.
ಅಪರಾಹ್ನ ಭಜನಾ ಕಾರ್ಯಕ್ರಮದ ಬಳಿಕ ಪ್ರತಿಭಟನಾ ಸಭೆಯಲ್ಲಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿದರು. ಎಡಪಂಥೀಯ ಚಿಂತನೆಗಳಿರುವ ದೇವರನ್ನು ನಂಬದ ವ್ಯಕ್ತಿಗಳು ಇಂದು ಶಬರಿಮಲೆ ಕ್ಷೇತ್ರವನ್ನು ಅಪವಿತ್ರಗೊಳಿಸುವ ಹುನ್ನಾರ ನಡೆಸುತ್ತಿದ್ದು, ಇದು ಹಿಂದು ಧರ್ಮದ ಮೇಲೆ ನಡೆಯುತ್ತಿರುವ ದಾಳಿ ಎಂದು ಅವರು ಪ್ರತಿಪಾದಿಸಿದರು.
ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಮತ್ತು ಹಿಂದು ಸಂಘಟನೆಗಳ ಜಾಗೃತಿ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ವೇದಿಕೆಯಲ್ಲಿ ಸಂಜೀವ ಗುರುಸ್ವಾಮಿ, ಕಮಲ ಗುರುಸ್ವಾಮಿ, ಯೋಗೀಶ್, ಧರಣೀಶ್, ಉಮೇಶ್, ಮೋಹನದಾಸ್, ರತ್ನಾಕರ, ಹೊನ್ನಪ್ಪ ಗುರುಸ್ವಾಮಿಗಳು ಉಪಸ್ಥಿತರಿದ್ದರು. ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಮುಂಭಾಗ ವಿವಿಧ ಹಿಂದು ಸಂಘಟನೆಗಳ ಮುಖಂಡರು ಆಸೀನರಾಗಿದ್ದರು.