ಪುತ್ತೂರು ಸಮೀಪ ಪೋಳ್ಯ ಎಂಬಲ್ಲಿ ಮನೆಯೊಂದರ ಎದುರೇ ಸ್ಫೋಟಕವೊಂದನ್ನು ಸಿಡಿಸಿದ ಪ್ರಕರಣ ಮಂಗಳವಾರ ಬೆಳಗ್ಗೆ ವರದಿಯಾಗಿದ್ದು, ಹಿಂದೆ ಮನೆಕೆಲಸದಲ್ಲಿದ್ದು, ಬಳಿಕ ಆತನನ್ನು ತೆಗೆದ ಕಾರಣ ದ್ವೇಷದಲ್ಲಿ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ನಾರಾಯಣ ಪ್ರಸಾದ್ ಎಂಬವರ ಪತ್ನಿ ಶಾಲಿನಿ ಗಾಯಾಳು. ಮಂಗಳವಾರ ನಸುಕಿನ ಜಾವ ಘಟನೆ ಸಂಭವಿಸಿದೆ. ಮನೆಯ ಬಳಿ ಮೂರು ಕಡೆ ಸ್ಪೋಟಕ ಇಟ್ಟಿದ್ದು ಈ ಘಟನೆಗೆ ಕಾರಣ. ನಾರಾಯಣ ಪ್ರಸಾದ್ ರವರ ಮನೆಯಲ್ಲಿ ಸುಮಾರು 3 ತಿಂಗಳ ಹಿಂದೆ ಕೆಲಸಕ್ಕೆ ಇದ್ದ ಬಾಬು ಯಾನೆ ಬಾಲು ಎಂಬಾತನನ್ನು ಕೆಲಸದಿಂದ ತೆಗೆದು ಹಾಕಿದ ದ್ವೇಷದಿಂದ ಈ ಕೃತ್ಯವನ್ನು ಎಸಗಿರುವ ಬಗ್ಗೆ ಶಂಕೆಯಿದ್ದು ಪರಾರಿಯಾಗಿರುವ ಆರೋಪಿಯ ಪತ್ತೆಯ ಬಗ್ಗೆ ತಂಡ ರಚಿಸಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದಾರೆ.
ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ನಾರಾಯಣ ಪ್ರಸಾದ್ ಎಂಬವರ ಮನೆಯ ಹೊರಗಡೆ ಬೆಳಗ್ಗೆ ಸುಮಾರು 2 ಗಂಟೆಗೆ ಶಬ್ದ ಕೇಳಿದ್ದು, ನಾರಾಯಣ ಪ್ರಸಾದ್ ಮತ್ತು ಅವರ ಹೆಂಡತಿ ಶಾಲಿನಿ ಮನೆಯ ಬಾಗಿಲನ್ನು ತೆರೆದಾಗ ಒಂದು ಕಚ್ಚಾ ಬಾಂಬ್ ಸ್ಪೋಟಗೊಂಡಿದೆ. ಶಾಲಿನಿಯವರಿಗೆ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ,ನಾರಾಯಣ ಪ್ರಸಾದ್ ರವರು ಶಾಲಿನಿಯವರನ್ನು ಪುತ್ತೂರು ಖಾಸಗಿ ಚಿಕಿತ್ಸೆ ಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಮನೆಯ ಹೊರಗಡೆ ಕಿಟಕಿಯಲ್ಲಿ 2 ಜೀವಂತ ಕಚ್ಚಾ ಬಾಂಬ್ ಮತ್ತು 1 ಸಿಡಿದಿರುವ ಬಾಂಬ್ ಪತ್ತೆಯಾಗಿದ್ದು, ಪರಿಶೀಲನೆ ಮಾಡಿದಾಗ ಜೆಲ್ ಬೇಸ್ಡ್ ಅಮೋನಿಯಂ ನೈಟ್ರೇಟ್ ನಿಂದ ತಯಾರಿಸಿದ ಬಾಂಬ್ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ವರಿಷ್ಠಾಧಿಕಾರಿ ತಿಳಿಸಿದ್ದಾರೆ.