ನಮ್ಮೂರು

ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿ ಚೆನ್ನೈತೋಡಿ ಶಾಲೆ

 

ಬಂಟ್ವಾಳ ತಾಲೂಕಿನ ವಾಮದಪದವು ಪೇಟೆಯ ಹೃದಯಭಾಗದಲ್ಲಿರುವ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚೆನ್ನೈತ್ತೋಡಿ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಶಾಲಾಭಿವೃದ್ಧಿಗೆ ಪೂರಕವಾದ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನ, ಹಳೇ ವಿದ್ಯಾರ್ಥಿಗಳು-ಪೋಷಕರು-ಶಿಕ್ಷಕರು ಹಾಗೂ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡಿ.22ರಂದು ಶಾಲಾ ಶತಮಾನ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಿಸಲಾಗಿದ್ದು ಇದಕ್ಕಾಗಿ ವ್ಯಾಪಕ ಪೂರ್ವಭಾವಿ ಸಿದ್ಧತೆ ನಡೆಯುತ್ತಿದೆ.

ಶಾಲಾ ಆರಂಭ:

1918ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡ ಈ ವಿದ್ಯಾದೇಗುಲ ನಂತರ ದಾನಿಗಳು, ಶಿಕ್ಷಕರು, ವಿದ್ಯಾಭಿಮಾನಿಗಳ ಸಹಕಾರದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. ನಂತರ ಹಂತಹಂತವಾಗಿ ಬೆಳೆಯುತ್ತಾ ಬಂದ ಈ ಶಾಲೆಯು ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳ ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಪೂರಕವಾದ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಅತ್ಯುತ್ತಮ ಶಾಲೆಯಾಗಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿತು. ಪರಿಸರದ ಹಲವು ಗ್ರಾಮಗಳ ಮಕ್ಕಳ ಪಾಲಿಗೆ ಈ ಶಾಲೆಯು ಆಶಾಕಿರಣವಾಗಿದ್ದು ಇಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅದೆಷ್ಟೋ ಮಂದಿ ಇಂದು ರಾಜ್ಯ, ದೇಶ ವಿದೇಶಗಳಲ್ಲಿ ಉನ್ನತ ಸಾಧನೆಗೈಯುತ್ತಿದ್ದಾರೆ.

ಪ್ರಸ್ತುತ ಸ್ಥಿತಿ: 

ಪ್ರಸ್ತುತ ಉನ್ನತೀಕರಿಸಿದ ಮಾದರಿ ಶಾಲೆಯಾಗಿರುವ ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಒಂದರಿಂದ ೮ನೇ ತರಗತಿವರೆಗೆ 294 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. 12 ಮಂದಿ ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಪ್ರಸ್ತುತ ಪ್ರಭಾರ ಮುಖ್ಯ ಶಿಕ್ಷಕರಿದ್ದು ಪೂರ್ಣಕಾಲಿಕ ಮುಖ್ಯ ಶಿಕ್ಷಕರನ್ನು ನೇಮಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ.

ಶತಮಾನ ಯೋಜನೆಗಳು:

ರೂ.25 ಲಕ್ಷ ವೆಚ್ಚದಲ್ಲಿ ಮಕ್ಕಳ ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ರಂಗಮಂದಿರ ನಿರ್ಮಾಣ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅನ್ನದಾಸೋಹ ಭೋಜನ ಶಾಲೆ ನಿರ್ಮಾಣ, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿ ಸುಸಜ್ಜಿತ ಆಟದ ಮೈದಾನ, ಶಾಲಾ ಆವರಣ ಗೋಡೆ ನಿರ್ಮಾಣ, ಶೌಚಾಲಯ, ವಾಚನಾಲಯ, ಕ್ರೀಡಾ ಸಾಮಾಗ್ರಿಗಳ ದಾಸ್ತಾನು ಕೊಠಡಿ ನಿರ್ಮಾಣ ಸಹಿತ ಗುಣಮಟ್ಟದ ಕಲಿಕೆಗೆ ಪೂರಕವಾದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಶತಮಾನೋತ್ಸವದ ಕೊಡುಗೆಯಾಗಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ನೆರವೇರುವರೇ ಸರಕಾರ, ಸ್ಥಳೀಯಾಡಳಿತಗಳು, ಜನಪ್ರತಿನಿಧಿಗಳು, ದಾನಿಗಳು, ಶಾಲಾ ಹಳೇ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ.

ಶತಮಾನ ಸಂಭ್ರಮದೊಳಗೆ:

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಕ್ರೀಡಾಕೂಟಗಳು, ಸಾಂಸ್ಕೃತಿಕ ಪ್ರದರ್ಶನಗಳು, ಸಾಹಿತ್ಯಿಕ ಕಮ್ಮಟಗಳು, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಗುರುವಂದನೆ ಮೊದಲಾದ ಕಾರ್‍ಯಕ್ರಮಗಳೊಂದಿಗೆ, ವಿಶೇಷ ಅತಿಥಿ ಗಣ್ಯರ ಉಪಸ್ಥಿತಿಯೊಂದಿಗೆ ಈ ಶಾಲೆಯ ಶತಮಾನೋತ್ಸವವನ್ನು ಮಾದರಿಯಾಗಿ ನಡೆಸಲು ಯೋಜನೆ ರೂಪಿಸಲಾಗಿದ್ದು ಈಗಾಗಲೇ ವಿದ್ಯಾಭಿಮಾನಿಗಳು ಶತಮಾನೋತ್ಸವದ ಯಶಸ್ವಿಗಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ ಈ ಶಾಲೆಯ ಶತಮಾನ ಸಂಭ್ರಮವು ಊರಿನ ಹಬ್ಬವಾಗಿ ಆಚರಿಸಲ್ಪಡಬೇಕೆನ್ನುವುದು ಊರ ವಿದ್ಯಾಭಿಮಾನಿಗಳ ಅಪೇಕ್ಷೆಯಾಗಿದೆ.

ಶತಮಾನೋತ್ಸವ ಸಮಿತಿ:

ಈಗಾಗಲೇ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಗೌರವಾಧ್ಯಕ್ಷರು, ಹಂಝ ಎ.ಬಸ್ತಿಕೋಡಿ ಅಧ್ಯಕ್ಷರು, ನಾರಾಯಣ ಶೆಟ್ಟಿ ಪರಾರಿ ಸಂಚಾಲಕರು, ಡೇನಿಸ್ ಫೆರ್ನಾಂಡಿಸ್ ದೇರೊಟ್ಟು ಪ್ರಧಾನ ಕಾರ್ಯದರ್ಶಿ, ಅನಂತ ಪೈ ವಾಮದಪದವು ಕೋಶಾಧಿಕಾರಿ, ನವೀನಚಂದ್ರ ಶೆಟ್ಟಿ, ಶ್ರೀಧರ ಪೈ, ರಾಮರಾಯ ನಾಯಕ್, ಚಂದ್ರಶೇಖರ ಶೆಟ್ಟಿ, ಕಮಲ್ ಶೆಟ್ಟಿ ಬೊಳ್ಳಾಜೆ ಉಪಾಧ್ಯಕ್ಷರುಗಳು, ಮೋಹನದಾಸ ಗಟ್ಟಿ ಮತ್ತು ಗೋಪಾಲ ಅಂಚನ್ ಸಂಘಟನಾ ಕಾರ್ಯದರ್ಶಿಗಳು, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ ಮತ್ತು ಮಾಧವ ಕುಲಾಲು ಜತೆಕಾರ್‍ಯದರ್ಶಿಗಳಾಗಿರುವ ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದೆ. ಇದರೊಂದಿಗೆ ಆನಂದ ಆಚಾರ್ಯ ಹರ್ಕಾಡಿ ಅಧ್ಯಕ್ಷತೆಯ ಶಾಲಾಭಿವೃದ್ಧಿ ಸಮಿತಿ, ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ಅಧ್ಯಕ್ಷತೆಯ ಹಳೇ ವಿದ್ಯಾರ್ಥಿ ಸಂಘ, ಜಾನೆಟ್ ಪ್ರಭಾರ ಮುಖ್ಯ ಶಿಕ್ಷಕರಾಗಿರುವ ಶಿಕ್ಷಕವೃಂದ ಮತ್ತು ವಿದ್ಯಾರ್ಥಿ ವೃಂದ ಶತಮಾನೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ