ಅಧ್ಯಯನಶೀಲತೆ ಮತ್ತು ವಿಚಾರಗಳನ್ನು ಇನ್ನೊಬ್ಬರಿಂದ ಕೇಳಿ ತಿಳಿಯುವುದು ಉದಯೋನ್ಮುಖ ಸಾಹಿತಿಗಳಿಗೆ ಅಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ, ಅಂಕಣಕಾರ ಪ್ರೊ. ವಿ.ಬಿ.ಅರ್ತಿಕಜೆ ಹೇಳಿದರು.
ಬಂಟ್ವಾಳ ತಾಲೂಕು ತುಂಬೆ ಕಡೆಗೋಳಿಯಲ್ಲಿರುವ ನಿರತ ಸಾಹಿತ್ಯ ಸಂಪದದ 22ನೇ ಸವಿಸಂಭ್ರಮದ ನೆನಪಿನಲ್ಲಿ ಸಾಹಿತ್ಯದೆಡೆಗೆ ನಮ್ಮ ನಡೆ ಎಂಬ ಕಾರ್ಯಕ್ರಮ ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆಯಿತು. ಇದರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರೊ. ಅರ್ತಿಕಜೆ, ಓದಿ ಅರ್ಥ ಮಾಡಿಕೊಳ್ಳಿ. ಅರ್ಥ ಆಗದಿದ್ದರೆ ಕೇಳಿ ಎಂದು ವಿದ್ಯಾರ್ಥಿ ಕವಿ, ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಆಧುನಿಕ ಸಾಹಿತ್ಯದಲ್ಲಾಗುತ್ತಿರುವ ಬದಲಾವಣೆಗಳನ್ನು ವಿಶ್ಲೇಷಿಸಿದ ಅವರು ಯುವ ಕವಿಗಳು ಇಂದು ಪ್ರಬುದ್ಧರಾಗಬೇಕಿದ್ದರೆ, ಓದುವಿಕೆ ಅಗತ್ಯ ಎಂದು ವಿವರಿಸಿದರು.
ವೇದಿಕೆಯಲ್ಲಿ ಕನ್ನಡ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೊಳಕೆ ಗಂಗಾಧರ ಭಟ್, ನಿರತ ಸಾಹಿತ್ಯ ಸಂಪದದ ಅಧ್ಯಕ್ಷ ಕರುಣಾಕರ ಮಾರಿಪಳ್ಳ, ಸಂಯೋಜಕ ದಿನೇಶ್ ಎನ್ ತುಂಬೆ, ಸಂಚಾಲಕ ಅಬ್ದುಲ್ ಮಜೀದ್ ಎಸ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ನಿರತ ಸಾಹಿತ್ಯ ಸಂಪದ ಗೌರವಾಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಬಿಎಂ.ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಾಹಿತ್ಯ ಚಟುವಟಿಕೆಗಳನ್ನು ಇಂದು ಸಂಘಟನೆಗಳು ನಡೆಸುತ್ತಿರುವುದು ಶ್ಲಾಘನೀಯ, ನಿರತ ಸಂಘಟನೆಯಿಂದ ಮತ್ತುಷ್ಟು ಪ್ರತಿಭೆಗಳು ಹೊರಬರಲಿ ಎಂದು ಆಶಿಸಿದರು. ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ವಿಶ್ವನಾಥ ಬಂಟ್ವಾಳ ಮಾತನಾಡಿ, ಬಂಟ್ವಾಳ ಸಹಿತ ದ.ಕ. ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳು ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಈ ಕಾರ್ಯಕ್ರಮ ಏರ್ಪಟ್ಟಿರುವುದು ಸಂತಸದಾಯಕ. ಪಂಜೆ ಮಂಗೇಶರಾಯರು ಹುಟ್ಟಿದ ಬಂಟ್ವಾಳದಲ್ಲಿ ಮತ್ತುಷ್ಟು ಸಾಹಿತ್ಯಪ್ರೇಮಿಗಳು ಮೂಡಿಬರಲಿ ಎಂದರು. ಸರಕಾರಿ ಪ್ರೌಢಶಾಲೆ ಸುಜೀರು ಶಿಕ್ಷಕ ಬಿ.ಮಹಮ್ಮದ್ ತುಂಬೆ, ಕವಯತ್ರಿ ಪಲ್ಲವಿ ಕಾರಂತ ಉಪಸ್ಥಿತರಿದ್ದು, ಶುಭ ಹಾರೈಸಿದರು. ನಿರತ ಬಳಗದ ಸಂಯೋಜಕ ತಾರಾನಾಥ ಕೈರಂಗಳ ಸ್ವಾಗತಿಸಿದರು. ವಿನೋದ್ ಕುಮಾರ್ ಪುದು ಪ್ರಾಸ್ತಾವಿಕ ಮಾತನಾಡಿ, ನಿರತ ಬೆಳೆದುಬಂದ ಹಾದಿಯನ್ನು ವಿವರಿಸಿದರು. ನಿರತ ಸಾಹಿತ್ಯ ಸಂಪದದ ಅಧ್ಯಕ್ಷ ಕರುಣಾಕರ ಮಾರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಬೃಜೇಶ್ ಅಂಚನ್ ವಂದಿಸಿದರು.
ಬಳಿಕ ವಿದ್ಯಾರ್ಥಿ ಮತ್ತು ಸಾಹಿತ್ಯ ಎಂಬ ಸಂವಹನ ಚಿಂತನ ನಡೆಯಿತು.
ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಹಮಾನ್ ಡಿ ಬಿ ಅವರು ಸಮನ್ವಯಕಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭ ಮಾತನಾಡಿದ ಅವರು ಇಂದು ಶಿಕ್ಷಣವು ಫಲಿತಾಂಶದ ಮೇಲೆ ಅವಲಂಬಿಸಿದ್ದು ಸಾಹಿತ್ಯ ದತ್ತ ಗಮನ ಕಡಿಮೆಯಾಗಿದೆ.ವಿದ್ಯಾರ್ಥಿಯನ್ನು ಒಳ್ಳೆಯ ನಾಗರಿಕನಾಗಿ ರೂಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದರು. ಕಾರ್ಯಕ್ರಮದಲ್ಲಿ ಮೆಲ್ಕಾರ್ ಮಹಿಳಾ ಕಾಲೇಜಿನ ಪ್ರಥಮ ಬಿ ಎ ವಿದ್ಯಾರ್ಥಿನಿ ಫಾತಿಮತ್ ನೌಶೀನಾ , ಕಲ್ಲಡ್ಕ ಶ್ರೀರಾಮ ಕಾಲೇಜು ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಸುಭಾಷಿಣಿ, ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ದ್ವಿತೀಯ ಬಿ ಕಾಂ ವಿದ್ಯಾರ್ಥಿ ನಿ ಕೀರ್ತನ, ತುಂಬೆ ಪದವಿ ಪೂರ್ವ ಕಾಲೇಜಿನ ತವೀಝ್, ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ಹಲೀಮ ಮುನವ್ವರ,ಮೊಡಂಕಾಪು ಕಾಮೇಲ್ ಕಾಲೇಜಿನ ಯಾಸೀರ್ ಅಫ್ರೀನ್ ಉಪಸ್ಥಿತರಿದ್ದರು. ನಿರತ ಸಾಹಿತ್ಯ ಸಂಪದದ ಗೌರವಾಧ್ಯಕ್ಷ ವಿ ಸು ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗೀತಾ ಎಸ್ ಕೊಂಕೋಡಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಸುಧಾ ನಾಗೇಶ್ ವಹಿಸಿದ್ದರು. ಸಾಹಿತಿಗಳಾದ ಕೆ. ಮುರುಗಯ್ಯ ಕೊಗನೂರುಮಠ, ಡಿ.ಜಯರಾಮ ಪಡ್ರೆ, ಮಹಮ್ಮದ್ ಉವೈಸ್, ಮಹಮ್ಮದ್ ಶಹನ್, ಪಿ.ಎಸ್.ಮಹಮ್ಮದ್, ಪೂವಪ್ಪ ನೇರಳಕಟ್ಟೆ, ಆನಂದ ರೈ ಅಡ್ಕಸ್ಥಳ, ಚೇತನ್ ಮುಂಡಾಜೆ, ಎಂ.ಡಿ.ಮಂಚಿ, ರಜನಿ ಚಿಕ್ಕಯ್ಯಮಠ ಕವನ ವಾಚಿಸಿದರು. ಸಂಯೋಜಕ ಬೃಜೇಶ್ ಅಂಚನ್ ಉಪಸ್ಥಿತರಿದ್ದರು. ಬಶೀರ್ ಎಂ.ಪಿ.ಕಾರ್ಯಕ್ರಮ ನಿರೂಪಿಸಿದರು.