ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ವೈಭವದ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮವನ್ನು ಅ.14ರಂದು ಸಂಜೆ 6 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ಅ. 10ರಂದು ಕುದ್ರೋಳಿ ಕ್ಷೇತ್ರದಲ್ಲಿ ಕಂಗೊಳಿಸುವ ದರ್ಬಾರು ಮಂಟಪದಲ್ಲಿ ಗಣಪತಿ, ನವದುರ್ಗೆಯರು, ಶಾರದಾ ಮಾತೆ ಪ್ರತಿಷ್ಠಾಪನೆಯ ಮೂಲಕ ನವರಾತ್ರಿ ಮಹೋತ್ಸವ ಆರಂಭವಾಗಲಿದೆ. ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಪ್ರತಿನಿತ್ಯ ಸಾಂಸ್ಕೃತಿಕ ವೈಭವ: ದಸರಾ ಮಹೋತ್ಸವ ಅಂಗವಾಗಿ ಪ್ರತಿನಿತ್ಯ ದೇಶದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರದ ಪ್ರಮುಖ ರಾಜರಸ್ತೆಗಳಿಗೆ ವಿದ್ಯುದ್ದೀಪಾಲಂಕಾರ ನಡೆಯುತ್ತಿದೆ. ಇದು ಮಾತ್ರವಲ್ಲದೆ ಡಿವೈಡರ್‌ಗಳಿಗೆ ಬಣ್ಣ ಬಳಿಯುವ ಕೆಲಸವನ್ನು ಮನಪಾ ನಡೆಸುತ್ತಿದೆ.
ಅ.19 ಶೋಭಾಯಾತ್ರೆ: ಅ. 19ರಂದು ಶೋಭಾಯಾತ್ರೆ ನಡೆಯಲಿದ್ದು, ಈ ಬಾರಿ 70ಕ್ಕೂ ಅಧಿಕ ಟ್ಯಾಬ್ಲೋಗಳು, 50ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಲಿವೆ ಎಂದು ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ ತಿಳಿಸಿದ್ದಾರೆ.