ಬಂಟ್ವಾಳ

ಬಂಟ್ವಾಳದ ಸುಸಜ್ಜಿತ ಆಸ್ಪತ್ರೆಗೆ ಅರಿವಳಿಕೆ ತಜ್ಞರ ಕೊರತೆ ನೀಗಿಸಲು ಕ್ರಮ – ಸಂಸದ ನಳಿನ್

ಈಗಾಗಲೇ ಆಧುನೀಕರಣಗೊಂಡಿರುವ ಬಂಟ್ವಾಳದಲ್ಲಿರುವ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರ ಸಹಿತ ವೈದ್ಯರ ಕೊರತೆ ಇದ್ದು, ಅದನ್ನು ನೀಗಿಸಲು ಖಾಸಗಿ ಸಹಭಾಗಿತ್ವದೊಂದಿಗೆ ಕ್ರಮ ಕೈಗೊಳ್ಳುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದ್ದಾರೆ.

ಶುಕ್ರವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಅರಿವಳಿಕೆ ತಜ್ಞರ ಸಹಿತ ಡ್ಯೂಟಿ ಡಾಕ್ಟರ್ ಗಳ ಕೊರತೆ ಆಸ್ಪತ್ರೆಗಿದೆ ಎಂದರು. ಈ ಸಂದರ್ಭ ಉತ್ತರಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಶಾಸಕ ರಾಜೇಶ್ ನಾಯ್ಕ್, ತಾಲೂಕು ಆರೋಗ್ಯಾಧಿಕಾರಿಗಳು ಸಭೆಯೊಂದನ್ನು ನಿಗದಿಪಡಿಸಿ, ವೈದ್ಯರ ಕೊರತೆ ಸಹಿತ ಆಸ್ಪತ್ರೆಗೆ ಅಗತ್ಯವಾಗಿ ಬೇಕಾದ ವಿಚಾರಗಳನ್ನು ಚರ್ಚಿಸಲು ಸಲಹೆ ನೀಡಿದರು. ಇದೇ ವೇಳೆ ಮಂಗಳೂರಿನ ಎ.ಜೆ. ಆಸ್ಪತ್ರೆಯು ಬಂಟ್ವಾಳ ಸರಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ಮುಂದೆ ಬಂದಿದ್ದು, ಆಸ್ಪತ್ರೆಗೆ ಬೇಕಾದ ಅಗತ್ಯ ವಿಚಾರಗಳಿಗೆ ಪೂರ್ಣ ಸಹಯೋಗ ನೀಡುವುದಾಗಿ ಎ.ಜೆ.ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಶಾಂತ್ ಮಾರ್ಲ ಹೇಳಿದರು.

ಇಎನ್ ಟಿ ಸರ್ಜನ್ ಇದ್ದರೂ ಉಪಕರಣಗಳ ಕೊರತೆ ಇದೆ, ಆಸ್ಪತ್ರೆಗೊಂದು ಎಸ್.ಟಿ.ಪಿ.ಯ ಅಗತ್ಯವಿದೆ, ಸಿಬ್ಬಂದಿಗಳ ಕೊರತೆಯೂ ಇದ್ದು, ಅದನ್ನು ನೀಗಿಸಬೇಕಾಗಿದೆ ಎಂದು ಸಮದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ. ಸದಾಶಿವ ಮಾಹಿತಿ ನೀಡಿದರು.

ಕಳೆದ ಸಾಲಿನ ಖರ್ಚು ವೆಚ್ಚಗಳ ಪಟ್ಟಿಯನ್ನು ನೀಡುತ್ತಿದ್ದ ಸಂದರ್ಭ ಲೆಕ್ಕಾಧಿಕಾರಿಯನ್ನು ಪ್ರಶ್ನಿಸಿದ ಸಂಸದ ನಳಿನ್, ಇಲ್ಲಿನ ಲೆಕ್ಕಪತ್ರವನ್ನು ಸರಿಯಾಗಿ ಕೊಟ್ಟಿಲ್ಲ. ಸಿಸ್ಟಮೇ ಸರಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಎಕ್ಸ್ ರೇ ಮತ್ತಿತರ ವಿಷಯಗಳಲ್ಲಿ ಒಂದೇ ವಿಷಯಕ್ಕೆ ಹೊಂದಿಕೊಂಡಂತಿರುವ ಖರ್ಚು ವೆಚ್ಚಗಳ ಪಟ್ಟಿಯನ್ನು ತೋರಿಸುವಾಗ ಸಮರ್ಪಕ ರೀತಿಯಲ್ಲಿ ಒದಗಿಸಬೇಕು, ಈಗ ಕೊಟ್ಟ ಲೆಕ್ಕಪತ್ರದ ವಿಧಾನ ಪರಿಪೂರ್ಣವಾಗಿಲ್ಲ. ಹೀಗಿದ್ದಾಗ ಶಾಸಕರು ಇದನ್ನು ಅನುಮೋದಿಸುವುದಾದರೂ ಹೇಗೆ ಎಂದು ಪ್ರಶ್ನಿಸಿ, ಮುಂದಿನ ಬಾರಿ ಹೀಗಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು.

ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಮಂಗಳೂರು ಎ.ಜೆ.ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಶಾಂತ್ ಮಾರ್ಲ,   ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಸದಾಶಿವ  ,ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ವೈದ್ಯಾಧಿಕಾರಿ ಡಾ.ಸುರೇಂದ್ರ ನಾಯ್ಕ್ ಆಸ್ಪತ್ರೆಯ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ದೇವದಾಸ ಶೆಟ್ಟಿ, ಜಿ.ಆನಂದ, ಮೋನಪ್ಪ ದೇವಸ್ಯ, ರಾಮದಾಸ ಬಂಟ್ವಾಳ, ದೇವಪ್ಪ ಪೂಜಾರಿ,  ಗಣೇಶ್ ರೈ ಮಾಣಿ, ಪ್ರಭಾಕರ ಪ್ರಭು ಮೊದಲಾದವರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ