ಸುರತ್ಕಲ್ – ಬಿ.ಸಿ.ರೋಡ್ ಚತುಷ್ಪಥ ರಸ್ತೆಯಲ್ಲಿ ಹೊಂಡಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಸುರತ್ಕಲ್ ಕಡೆಯಿಂದ ದುರಸ್ತಿ ಕಾರ್ಯ ಆರಂಭಗೊಂಡಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ಧಾರೆ.
ಶುಕ್ರವಾರ ಬಂಟ್ವಾಳದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಲ್ ಗೇಟ್ ಸಮೀಪ, ಬಿ.ಸಿ.ರೋಡ್ ಸಹಿತ ಹಲವೆಡೆ ರಸ್ತೆಗಳು ನಾದುರಸ್ತಿಯಲ್ಲಿದ್ದು , ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಸ್ತೆ ರಿಪೇರಿ ಕಾರ್ಯ ಆರಂಭಗೊಂಡಿದ್ದು, ಅಕ್ಟೋಬರ್ ಅಂತ್ಯದೊಳಗೆ ಮುಕ್ತಾಯಗೊಳ್ಳಲಿದೆ ಎಂದರು.
ಇದೇ ವೇಳೆ ಬಿ.ಸಿ.ರೋಡ್ ನಿಂದ ಮಂಗಳೂರಿನವರೆಗೆ ಷಟ್ಪಥ ರಸ್ತೆ ನಿರ್ಮಾಣದ ಕಾರ್ಯ ಆರಂಭಗೊಳ್ಳುವುದಾಗಿ ತಿಳಿಸಿದ ಅವರು, ಈ ಸಂದರ್ಭ ರಸ್ತೆಯನ್ನು ಅತಿಕ್ರಮಿಸಿದವರು, ರಸ್ತೆ ಅಗಲೀಕರಣದ ವೇಳೆ ಪರಿಹಾರ ಪಡೆದೂ ಅಂಗಡಿ ಮುಂಗಟ್ಟುಗಳನ್ನು ಬಿಟ್ಟುಕೊಡದವರನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸುವುದಾಗಿ ಹೇಳಿದರು. ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭ ಉಪಸ್ಥಿತರಿದ್ದರು.