ಬಂಟ್ವಾಳ ತಾಲೂಕಿನ ತುಂಬೆಯ ಸಾಹಿತ್ಯ ಸಂಘಟನೆ, ನಿರತ ಸಾಹಿತ್ಯ ಸಂಪದ 22ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಾಹಿತ್ಯದೆಡೆಗೆ ನಮ್ಮ ನಡೆ ಎಂಬ ಕಾರ್ಯಕ್ರಮವನ್ನು ಅ.7ರಂದು ಏರ್ಪಡಿಸಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ , ಬಂಟ್ವಾಳನ್ಯೂಸ್ ಸಂಪಾಧಕ ಹರೀಶ ಮಾಂಬಾಡಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಾಮಾಜಿಕ ಶಾಂತಿ, ನೆಮ್ಮದಿಯ ವಾತಾವರಣಕ್ಕೆ ಓದು ಮತ್ತು ಬರಹ ಸೂಕ್ತವಾಗಿದ್ದು, ಈ ದೃಷ್ಟಿಯಲ್ಲಿ ಸಾಹಿತ್ಯ ಪರಿಷತ್ತು, ಸಂಘಟನೆಗಳು ಒದಗಿಸುವ ವೇದಿಕೆಯನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್ ಮಾತನಾಡಿ, ಕನ್ನಡ ಭವನ ನಿರ್ಮಾಣ ಅಂತಿಮ ಹಂತದಲ್ಲಿದ್ದು ತಾಲೂಕಿನ ಸಾಹಿತ್ಯ ಚಟುವಟಿಕೆಗಳಿಗೆ ಇದು ವೇದಿಕೆ ಕಲ್ಪಿಸಲಿದೆ ಎಂದರು. ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್, ಹಿರಿಯ ಪತ್ರಕರ್ತ, ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ಸಾಧನಾ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ವಿಶ್ವನಾಥ ಬಂಟ್ವಾಳ ಶುಭ ಹಾರೈಸಿದರು. ಹಿರಿಯ ರಂಗಕರ್ಮಿ ಮಂಜುವಿಟ್ಲ, ಪತ್ರಕರ್ತ ಹಾಗೂ ಕವಿ ಫಾರೂಕ್ ಗೂಡಿನಬಳಿ ನಿರತ ಸಂಪದ ಬೆಳವಣಿಗೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನಿರತ ಸಾಹಿತ್ಯ ಸಂಪದ ಅಧ್ಯಕ್ಷ ಕರುಣಾಕರ ಮಾರಿಪಳ್ಳ, ಸಂಯೋಜಕರಾದ ದಿನೇಶ್ ಎನ್. ತುಂಬೆ ಮತ್ತಿತರರು ಉಪಸ್ಥಿತರಿದ್ದರು. ನಿರತ ಸಾಹಿತ್ಯ ಸಂಪದ ಗೌರವಾಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರತ ಸಾಹಿತ್ಯ ಸಂಪದ ಸಂಚಾಲಕ ಅಬ್ದುಲ್ ಮಜೀದ್ ಕಾರ್ಯಕ್ರಮ ನಿರ್ವಹಿಸಿದರು.ಸಂಯೋಜಕ ಬೃಜೇಶ್ ಅಂಚನ್ ವಂದಿಸಿದರು.