ಸುಣ್ಣ, ಬಣ್ಣದ ಚಿತ್ತಾರ ಪೇಟೆಯ ನಡುವೆ ಬಡ್ಡಕಟ್ಟೆಯಲ್ಲಿ ಕಸದ ರಾಶಿ ತುಂಬಿದ, ಗಲೀಜಾಗಿದ್ದ, ಮನುಷ್ಯರಿಗೆ ಪ್ರವೇಶಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಬಸ್ ತಂಗುದಾಣವೀಗ ಹೊಸ ರೂಪ ಪಡೆಯುತ್ತಿದೆ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಇದು ಪ್ರಯಾಣಿಕರ ಬಳಕೆಗೆ ಸಿದ್ಧವಾಗಲಿದೆ. ಇಷ್ಟಕ್ಕೆಲ್ಲ ಕಾರಣವಾದದ್ದು, ಪುರಸಭೆ ಬಂಟ್ವಾಳ ನೇತೃತ್ವದಲ್ಲಿ ಜೇಸಿ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು ಶುಕ್ರವಾರ ಬೆಳಗ್ಗೆ ನಡೆಸಿದ ಸ್ವಚ್ಛತಾ ಕಾರ್ಯಕ್ರಮ.
ಬಸ್ ನಿಲ್ದಾಣದಲ್ಲೀಗ ವರ್ಲಿ ಚಿತ್ತಾರ… ರೊಟೇರಿಯನ್ ಗಳಾದ ಮಂಜುನಾಥ ಆಚಾರ್ಯ, , ಜಯಪ್ರಕಾಶ್, ವಲ್ಲಭೇಶ ಶೆಣೈ, ಭೂಮಿಕಾ ಶೆಣೈ, ಮೇಘಾ ಆಚಾರ್ಯ, ವಿದ್ಯಾ ಅಶ್ವನಿ ರೈ, ಡಾ. ಶಶಿಕಲಾ ಸೋಮಯಾಜಿ ಮತ್ತು ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ವರ್ಲಿ ಚಿತ್ರ ರಚನೆಯಲ್ಲಿ ಕೈಜೋಡಿಸಿದರು.
ಸಾರ್ವಜನಿಕರಿಗೆ ಉಪಯೋಗಕ್ಕೇ ಇಲ್ಲದಂತೆ ಇದ್ದೂ ಇಲ್ಲದಂತಿರುವ ಬಸ್ ತಂಗುದಾಣವನ್ನು ಉಪಯೋಗಕ್ಕೆ ಅನುಕುಲ ಕಲ್ಪಿಸುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮುತುವರ್ಜಿಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಸುವರ್ಣ ವರ್ಷಾಚರಣೆ ಹಿನ್ನೆಲೆಯಲ್ಲಿ ಬಡ್ಡಕಟ್ಟೆ ಬಸ್ ತಂಗುದಾಣವನ್ನು ಮಾದರಿ ತಂಗುದಾಣವನ್ನಾಗಿ ರೂಪಿಲಾಗುತ್ತಿದೆ.
ವರ್ಲಿ ಚಿತ್ತಾರ ಸಹಿತ ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿದು ಹೊಸ ರೂಪ ಬಂದಿದೆ. ಇನ್ನು ಬೋರ್ಡು ಲಗತ್ತಿಸಿ, ಸಾರ್ವಜನಿಕ ಉಪಯೋಗಕ್ಕೆ ಒದಗಿಸುವುದಷ್ಟೇ ಬಾಕಿ.