ಅಕ್ಟೋಬರ್ ತಿಂಗಳಿಂದ ಬಂಟ್ವಾಳ ಪುರಸಭೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಹೇಳಿದ್ದಾರೆ.
ಗಾಂಧಿ ಜಯಂತಿಯಂದು ಬಂಟ್ವಾಳ ಪುರಸಭಾ ವ್ಯಾಪ್ತಿಯಾದ್ಯಂತ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪುರಸಭೆ ಅಧಿಕಾರಿಗಳ ಸಮಾಲೋಚನಾ ಸಭೆ ಬುಧವಾರ ಸಂಜೆ ನಡೆಯಿತು.
ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಅಕ್ಟೋಬರ್ ೨ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸ್ವಚ್ಛತೆ ಅರಿವು ಮೂಡಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಿತ ಸ್ವಯಂಸೇವಾಸಂಸ್ಥೆಗಳ ಸಹಯೋಗದೊಂದಿಗೆ ಬಂಟ್ವಾಳ ಪುರಸಭೆ ಜಾಥವನ್ನು ಆಯೋಜಿಸಿದೆ. ಬಂಟ್ವಾಳ, ಬಿ.ಸಿ.ರೋಡ್ ನ ಕೈಕಂಬ ಹಾಗೂ ಮೇಲ್ಕಾರ್ ನಿಂದ ಜಾಥಾ ಹೊರಟು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸಮಾವೇಶಗೊಳ್ಳಲಿದೆ. ಅಂದು ಬೆಳಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಸ್ವಚ್ಛತೆಯ ಅರಿವು ಮೂಡಿಸುವುದರೊಂದಿಗೆ ಸಂದೇಶಗಳನ್ನು ಸಾರ್ವಜನಿಕರಿಗೆ ನೀಡಲಿದ್ದು, ಪ್ಲಾಸ್ಟಿಕ್ ಮುಕ್ತ ಬಂಟ್ವಾಳದ ಮಹತ್ವವನ್ನು ಜನರಿಗೆ ಒದಗಿಸುವರು ಎಂದರು.
ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಈಗಾಗಲೇ ಅಂಗಡಿ ಮುಂಗಟ್ಟುಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ನಾಳೆಯಿಂದಲೇ ಒಂದೊಂದಾಗಿ ಅಂಗಡಿ, ಮಳಿಗೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ, ನಿಷೇಧಿತ ಪ್ಲಾಸ್ಟಿಕ್ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಅಂಗಡಿಗಳಿಗೆ ತೆರಳುವ ಗ್ರಾಹಕರು ಕೈಚೀಲಗಳನ್ನು ಕೊಂಡೊಯ್ದು ಸಹಕರಿಸಬೇಕು. ಪ್ಲಾಸ್ಟಿಕ್ ಮುಕ್ತ ಬಂಟ್ವಾಳಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ರೇಖಾ ಶೆಟ್ಟಿ ಹೇಳಿದರು.
ಪುರಸಭೆಯನ್ನು ಪ್ಲಾಸ್ಟಿಕ್ ಮತ್ತು ಕಸಮುಕ್ತಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ. ಹೀಗಾಗಿ ಪ್ರತಿ ವಾರ್ಡುಗಳಲ್ಲಿ ಸಾರ್ವಜನಿಕರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಸಮಿತಿ ರಚಿಸಿ ಸ್ವಚ್ಛ ವಾರ್ಡ್ ಮಾಡುವ ನಿಟ್ಟಿನಲ್ಲಿ ಮುನ್ನಡೆಯಲು ಸಹಕಾರ ಕೋರುವ ಕುರಿತು ಪ್ರಸ್ತಾಪಗಳು ಬಂದವು. ಅಂಗಡಿ ಮುಂಗಟ್ಟುಗಳ ಮಾಲೀಕರು ಪ್ಲಾಸ್ಟಿಕ್ ಮಾರದೇ ಇದ್ದರೆ ಅವರನ್ನು ಪ್ರೋತ್ಸಾಹಿಸುವುದು, ಅಭಿನಂದಿಸುವುದರ ಮೂಲಕ ಇನ್ನೊಬ್ಬರೂ ಅದೇ ಹಾದಿಯನ್ನು ಕಂಡುಕೊಳ್ಳಲು ಪ್ರೇರಣೆಯಾಗುತ್ತದೆ ಎಂಬ ಸಲಹೆಗಳು ಬಂದವು. ಇದೇ ವೇಳೆ ಬಡ್ಡಕಟ್ಟೆ ಮತ್ತು ಸಂಚಯಗಿರಿಯಲ್ಲಿ ಬೆಳಗ್ಗಿನ ಹೊತ್ತಿಗೆ ಸ್ವಚ್ಛತಾ ಕಾರ್ಯವನ್ನು ಆಯೋಜಿಸುವ ಕುರಿತು ತೀರ್ಮಾನಿಸಲಾಯಿತು.
ಸಮಾಲೋಚನಾ ಸಭೆಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಅಧಿಕಾರಿಗಳಾದ ಲೀಲಾವತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಪತ್ರಕರ್ತರಾದ ವೆಂಕಟೇಶ ಬಂಟ್ವಾಳ, ಸಂದೀಪ್ ಸಾಲ್ಯಾನ್, ಕಿಶೋರ್ ಪೆರಾಜೆ, ಚಂದ್ರಶೇಖರ ಕಲ್ಮಲೆ, ಲತೀಫ್ ನೇರಳಕಟ್ಟೆ ಮತ್ತಿತರರು ಪಾಲ್ಗೊಂಡರು.