ದೊಡ್ಡಗುಡ್ಡೆ ಸಮೀಪದ ಸಣ್ಣಕಾಡಿನ ಪಕ್ಕ ಸೋಮಣ್ಣನ ವಿಶಾಲವಾದ ಮನೆಯಲ್ಲೀಗ ಯಾರಿದ್ದಾರೆ? ಬೆಳಗ್ಗೆ ನೋಡಿದರೂ ಅಷ್ಟೇ, ರಾತ್ರಿ ನೋಡಿದರೂ ಅಷ್ಟೇ, ಸೋಮಣ್ಣ ಮತ್ತು ಅವರ ಪತ್ನಿ ಜಾನಕಮ್ಮ ಇಬ್ಬರೇ ಗಂಜಿ ಬೇಯಿಸಿ ಉಣ್ಣುತ್ತಾರೆ.
ಹಾಗಾದರೆ ಗಂಡ, ಹೆಂಡತಿಗೆ ಗತಿಯೇ ಇಲ್ಲವಾಯಿತೇ? ಅಲ್ಲವೇ ಅಲ್ಲ, ಸೋಮಣ್ಣರಿಗೆ ಮೂರು ಮಕ್ಕಳು. ಒಬ್ಬ ಗಲ್ಫ್’ನಲ್ಲಿದ್ದಾನೆ. ಮತ್ತೋರ್ವ ಬೊಂಬಾಯಿ. ಮೂರನೇ ಮಗ ಬೆಂಗಳೂರಲ್ಲಿದ್ದಾನೆ. ಮೂವರೂ ಮದುವೆ ಆಗಿದ್ದಾರೆ. ಅಲ್ಲೇ ಸೆಟಲ್ ಕೂಡ ಆಗಿರೋ ಕಾರಣ ದೊಡ್ಡಗುಡ್ಡೆಗೆ ಬರಲು ಆಗುವುದಿಲ್ಲ.
ಹಾಗಾದರೆ ಸೋಮಣ್ಣನಿಗೂ ಆತನ ಮಕ್ಕಳಿಗೂ ಭಯಂಕರ ಜಟಾಪಟಿ ಆಗಿರಬೇಕು. ಇಲ್ಲವಾದರೆ ಗಂಡ, ಹೆಂಡತಿ ಇಬ್ಬರೂ ಮನೆಯಲ್ಲಿ ತಾವು ಗಂಜಿ ಬೇಯಿಸಿ ಉಣ್ಣುವ ದರ್ದು ಏನಿತ್ತು?
ನಿಮ್ಮ ಮನದಲ್ಲಿ ಇಂಥ ಕುತೂಹಲ ಮೂಡಿದರೆ ಅದು ತಪ್ಪೇನಲ್ಲ. . ಏಕೆಂದರೆ ಸೋಮಣ್ಣನಿರೋ ಊರಲ್ಲಿ ಏನಿಲ್ಲದಿದ್ದರೂ ಮೊಬೈಲ್ ನೆಟ್ವರ್ಕ್ ಸಿಗುತ್ತದೆ. ಈಗಂತೂ ಜಿಯೋ ಸಿಮ್ಮು ಬಂದಿದೆ. ಸೋಮಣ್ಣ ದಿನದಲ್ಲಿ ಎರಡು ಬಾರಿಯಾದರೂ ಮಕ್ಕಳೊಂದಿಗೆ, ಸೊಸೆಯರೊಂದಿಗೆ ಮಾತನಾಡುತ್ತಾರೆ. ರಾತ್ರಿ ಪುಳ್ಳಿ(ಮೊಮ್ಮಕ್ಕಳು)ಗಳೊಂದಿಗೆ ಹರಟದಿದ್ದರೆ ಜಾನಕಮ್ಮನಿಗೆ ನಿದ್ದೆಯೇ ಬರುವುದಿಲ್ಲ.. ಎಲ್ಲರೂ ಫುಲ್ ಖುಷ್.
ಸೋಮಣ್ಣ, ನಿಮ್ಮ ಮಕ್ಕಳು ದೂರದಲ್ಲಿದ್ದಾರಲ್ವಾ ನಿಮಗೆ ಬೇಸರವಾಗಲ್ವಾ ಅಂದು ಯಾರಾದರೂ ಅಧಿಕಪ್ರಸಂಗ ಮಾತನಾಡಿ ಕೇಳಿದರೆ ಉರಿದು ಬೀಳುತ್ತಾರೆ. ಹೋಯ್. ಎಂಥದ್ದು ನಿಮ್ಮದು. ನನಗೆ ಎಲ್ಲರೂ ಇದ್ದಾರೆ, ದೂರದಲ್ಲಿದ್ದರೂ ಹತ್ತಿರದಲ್ಲಿದ್ದಂತೆ. ಏನೂ ತೊಂದರೆ ಇಲ್ಲ. ನಿಮ್ಮದೆಂಥದ್ದು ಪಿರಿಪಿರಿ ಎಂದು ಮರುಪ್ರಶ್ನೆ ಸೋಮಣ್ಣರದ್ದು ಸಿದ್ಧವಾಗಿರುತ್ತದೆ.
ಹಾಗಾದರೆ ನಮಗೇನು ಸಮಸ್ಯೆ?
ಅಲ್ಲೇ ಇರೋದು ನೋಡಿ ಹಕೀಕತ್ತು.
ಸೋಮಣ್ಣಂದೋ ವಿಶಾಲವಾದ ಮನೆ. ಅಂಗಳದಲ್ಲಿ ರಾಶಿ ಅಡಕೆ. ಮೊನ್ನೆಯಷ್ಟೇ ಸೋಮಣ್ಣ ಅಡಕೆ ಮಾರಿ ದುಡ್ಡು ಎಣಿಸಿದ್ದರು. ಯಾರಿಗೆ ಗೊತ್ತಾಯಿತೋ, ಗೊತ್ತಿಲ್ಲ. ಮೊನ್ನೆ ಯಾರೋ ದೊಡ್ಡ ಜೀಪಿನಲ್ಲಿ ಬಂದರು. ಬಂದವರ ಕೈಲಿ ನಾಲ್ಕೈದು ದೊಣ್ಣೆ, ಕತ್ತಿ ಎಲ್ಲವೂ ಇತ್ತು. ಬೆಳಗ್ಗೆ 11.30 ಕಳೆದು 12 ಆಗಿತ್ತೋ ಇಲ್ಲವೋ. ಸೋಮಣ್ಣ, ಮತ್ತವರ ಹೆಂಡತಿಯನ್ನು ಕಟ್ಟಿ ಹಾಕಿ ನಿಮ್ಮ ಮನೇ ಬೀರುವಿನ ಕೀಲಿಕೈ ಎಲ್ಲಿದೆ ಎಂದರು. ಎಂಥದ್ದು ನಿಮ್ಮದು ಎಂದು ಸೋಮಣ್ಣ ಪ್ರಶ್ನಿಸಿದ್ದಕ್ಕೆ ಎರಡೇಟು ಕೊಟ್ಟರು. ಇಡೀ ಮನೆ ಸೂರೆಗೊಂಡು ಹೊರಟು ಹೋದರು. ಹಾಡಹಗಲೇ ಒಂಟಿ ಮನೆಯಲ್ಲಿ ವೃದ್ಧ ದಂಪತಿಯನ್ನು ಕಟ್ಟಿ ಹಾಕಿ ದರೋಡೆ ಎಂಬ ಹೆಡ್ ಲೈನ್ ಪತ್ರಿಕೆಗಳಲ್ಲಿ ನಾಲ್ಕು ಕಲಂ ಸುದ್ದಿಯಾಗಿ ಬಂತು.
ಈ ಘಟನೆ ಬಳಿಕ ಸೋಮಣ್ಣ ದಂಪತಿ ಕುಸಿದು ಹೋದರು. ಆ ದಿನದಿಂದ ಅವರಿಗೆ ಒಂಟಿತನ ಕಾಡಲು ಆರಂಭಿಸಿತು.
ಅದಾದ ಬಳಿಕ ಕೆಲವೇ ತಿಂಗಳಲ್ಲಿ ಸೋಮಣ್ಣ ದಂಪತಿ ಜಾಗ ಮಾರಿ ಬೆಂಗಳೂರಿನ ಫ್ಲ್ಯಾಟ್ ಗೆ ವಲಸೆ ಹೋದರು.
ಸೋಮಣ್ಣ ದಂಪತಿ ಮಾಡಿದ್ದು ಸರಿಯಾ? ಅವರ ಮಕ್ಕಳದ್ದು ಇದರಲ್ಲೇನಿದೆ ತಪ್ಪು? ಸೋಮಣ್ಣ ದಂಪತಿ ಮೊದಲೇ ಮಕ್ಕಳೊಂದಿಗೆ ಇರಬೇಕಿತ್ತಾ? ಊರವರು ಈ ದಂಪತಿಯ ಕೇರ್ ತೆಗೆದುಕೊಳ್ಳಬೇಕಿತ್ತಾ? ಎಂಬಿತ್ಯಾದಿ ಪ್ರಶ್ನೋತ್ತರಗಳು ಆ ವರ್ಷದ ಮದುವೆ, ಮುಂಜಿಗಳ ಪ್ರಧಾನ ಸಬ್ಜೆಕ್ಟ್’ಗಳಾದವು.
ದೊಡ್ಡಗುಡ್ಡೆ ಎಂಬ ಊರಿದೆಯೋ, ಅಲ್ಲಿ ಸೋಮಣ್ಣ ಎಂಬವರು ಇದ್ದಾರೋ ನನಗೆ ಗೊತ್ತಿಲ್ಲ. ಏಕೆಂದರೆ ಇದು ಕೇವಲ ಕಾಲ್ಪನಿಕ ಕಥೆ. ಆದರೆ ವಾಸ್ತವವಾಗಿ ನಮ್ಮ ನಿಮ್ಮ ಕಣ್ಣೆದುರೆ ನಡೆಯುವ ಘಟನೆಗಳು ಇಂಥದ್ದೇ.
ಈ ಕಥೆಯಲ್ಲೂ ಅಷ್ಟೇ. ತಂದೆ ತಾಯಿಯರನ್ನು ಹಳ್ಳಿಯಲ್ಲಿ ಬಿಟ್ಟು ಪೇಟೆಯಲ್ಲಿ ವಾಸಿಸುವ ಮಕ್ಕಳು ಭಯಂಕರ ಕಠೋರ ಹೃದಯಿಗಳಂತೆ ಕಾಣಬಹುದು. ಆದರೆ ಅವರಿಗೂ ಹೆತ್ತವರ ಜೊತೆ ಬಾಳಬೇಕೆಂಬ ಆಸೆ ಇದ್ದೇ ಇರುತ್ತದೆ. ಉದ್ಯೋಗಾವಕಾಶಗಳು ಊರಲ್ಲೇ ಸಿಗೋದಿಲ್ಲ. ಗ್ಲೋಬಲೈಸೇಶನ್ ಮತ್ತು ಜನಸಂಖ್ಯಾ ಏರಿಕೆಯ ನೇರ ಪರಿಣಾಮ ಇದು. ಊರು ಬಿಟ್ಟು ಪರವೂರಿಗೆ ಜೀವನ ಸಂಧ್ಯಾ ಕಾಲದಲ್ಲಿ ಹೋಗುವುದೂ ಕಷ್ಟ. ಹೀಗಾಗಿ ಇಂದು ನಮ್ಮ ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತವೆ ಎಂಬ ಹೇಳಿಕೆ ಬಂದು ವರ್ಷಗಳಾದವು.
ಹೋಗಲಿ, ಪಟ್ಟಣಗಳಲ್ಲಿ (ಇದು ಮಹಾನಗರಗಳಿಗೆ ಅನ್ವಯಿಸುವ ಮಾತು) ಬೆಂಕಿಪೊಟ್ಟಣಗಳಂತೆ ಮನೆಗಳ ಸಂಖ್ಯೆ ಕಾಣಿಸುತ್ತವೆ. ಆದರೆ ಪಕ್ಕದ ಮನೆಯಾತ ಯಾರೆಂದು ಮತ್ತೊಬ್ಬನಿಗೆ ಗೊತ್ತಿರದಷ್ಟು ಬ್ಯುಸಿ. ಹೀಗಾಗಿಯೇ ಪಕ್ಕದ ಮನೆಗಳಲ್ಲಿ ಕಳ್ಳತನವಾದರೆ ಮತ್ತೊಂದು ಮನೆಗೆ ವಾರವಾದರೂ ಗೊತ್ತೇ ಆಗದ ಸ್ಥಿತಿ. ಏಕೆಂದರೆ ನನ್ನ ಮನೆ ಪಕ್ಕ ಯಾರಿದ್ದಾರೆ ಎಂದು ತಿಳಿಯುವ ಕುತೂಹಲವೇ ಇರೋದಿಲ್ಲ. ಅರೆಪಟ್ಟಣಗಳು ಎಂದು ಹೇಳಬಹುದಾದ ತಾಲೂಕು ಕೇಂದ್ರಗಳಲ್ಲೂ ಇಂಥದ್ದೇ ಸ್ಥಿತಿ ಬರುತ್ತಿದೆ. ಇಷ್ಟಾದರೆ ಒ.ಕೆ.
ಆದರೆ ಹಳ್ಳಿಗಳಿಗೂ ಪಟ್ಟಣದ ರೋಗ ಬಂದು ಬಡಿದಿದೆ. ಕೆಲ ಹಳ್ಳಿಗಳಲ್ಲಿ ದೊಡ್ಡ ದೊಡ್ಡ ತೋಟ, ಬಂಗಲೆಗಳನ್ನು ಬಲಾಢ್ಯ ಶ್ರೀಮಂತರು ಖರೀದಿಸುತ್ತಾರೆ. ಅವರ್ಯಾರು, ಏನು ಎಂಬುದೇ ಯಾರಿಗೂ ಗೊತ್ತಿರೋದೇ ಇಲ್ಲ. ಅವರು ಯಾರ್ಯಾರಿಗೋ ತೋಟ ನೋಡಲು ಗುತ್ತಿಗೆ ಕೊಡುತ್ತಾರೆ. ಅವರು ಯಾರ್ಯಾರನ್ನೋ ಕರೆದುಕೊಂಡು ಬಂದು ಕೆಲಸ ಮಾಡಿಸುತ್ತಾರೆ. ಒಂದು ಹಳ್ಳಿ ನೋಡನೋಡುತ್ತಲೇ ಅನೂಹ್ಯವಾಗಿ, ನಿಗೂಢವಾಗುತ್ತಾ ಹೋಗುತ್ತದೆ. ಅಲ್ಲಿ ವಯಸ್ಸಾದವರಷ್ಟೇ ಇರುತ್ತಾರೆ. ಮಕ್ಕಳು ದೊಡ್ಡ ಪೇಟೆಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಹಳ್ಳಿ ಕಟ್ಟೆ ಎಂಬುದು ನಿಧಾನವಾಗಿ ಬದಲಾಗುತ್ತಾ ಹೋಗುತ್ತದೆ. ಟೆಕ್ನಾಲಜಿ ಎಷ್ಟು ವೇಗವಾಗಿ ನಮ್ಮನ್ನೆಲ್ಲಾ ಜೋಡಿಸುತ್ತದೆಯೋ ಅಷ್ಟೇ ವೇಗವಾಗಿ ಸಂಬಂಧಗಳನ್ನು ಶಿಥಿಲಗೊಳಿಸುತ್ತದೆ ಎಂಬ ಮಾತು ಹಳ್ಳಿ ಬದುಕನ್ನು ನೋಡಿದರೆ ಗೊತ್ತಾಗುತ್ತದೆ. ಹಳ್ಳಿಗಳು ಮೂಲಸೌಕರ್ಯ ದೃಷ್ಟಿಯಿಂದ ಆಧುನಿಕಗೊಳ್ಳುವುದು ಬೇಕೇ ಬೇಕು. ಆದರೆ ಹಳ್ಳಿಗರೂ ಭಾವನಾರಹಿತರಾಗಿ, ಸಂವೇದನಾಶೂನ್ಯರಾಗಿ ವರ್ತಿಸಲು ಆರಂಭಿಸಿದರೆ ಎಲ್ಲೋ ಎಡವಟ್ಟಾಗಿದೆ ಎಂದರ್ಥ.
ನಾನು ಈಗ ಪ್ರಸ್ತಾಪಿಸಿರುವ ವಿಷಯವೆಲ್ಲವೂ ಗೊತ್ತಿರುವಂಥದ್ದೇ. ಸಮಸ್ಯೆಗಳನ್ನು ಬೊಟ್ಟು ಮಾಡುವುದಷ್ಟೇ ನನ್ನ ಕೆಲಸವೂ ಅಲ್ಲ. ನಮ್ಮ ಇತಿ ಮಿತಿಯಲ್ಲೇ ಪರಿಹಾರವೂ ಸಾಧ್ಯ ಎಂಬುದು ನನ್ನ ಅಭಿಪ್ರಾಯ.
ಸೋಮಣ್ಣನ ಕಥೆಯನ್ನೇ ನೋಡಿ. ಮನೆಯಲ್ಲಿ ಇಬ್ಬರಷ್ಟೇ ಇರುವುದು ಎಂದಾದರೆ, ಇಡೀ ಗ್ರಾಮದಲ್ಲಿ ಅಂಥ ಒಂಟಿ ಮನೆಗಳು ಹಾಗೂ ಒಂಟಿ ಜೀವಗಳು ಎಷ್ಟು ಎಂದು ಲೆಕ್ಕ ಹಾಕಲು ಪಂಚಾಯಿತಿಗೆ ದೊಡ್ಡ ಕೆಲಸವೇನೂ ಅಲ್ಲ. ಊರು ಉದ್ಧಾರ ಮಾಡಲೆಂದೇ ಹುಟ್ಟಿರುವ ಯುವಕ, ಯುವತಿ ಸಂಘ, ಊರಿನ ಅಭಿವೃದ್ಧಿ ಸಂಘಗಳಿಗೂ ಇಂಥ ಒಂಟಿ ಜೀವಗಳನ್ನು ಆಗಾಗ್ಗೆ ವಿಚಾರಿಸುತ್ತಲೇ ಇರಬೇಕು. ಸೋಮಣ್ಣನಂಥವರ ಮಕ್ಕಳೂ ಊರಿನ ಇತರ ನಾಗರಿಕರೊಂದಿಗೆ ಬೆರೆತು, ಅವರ ಕಷ್ಟ ಸುಖಗಳಿಗೆ ಸ್ಪಂದಿಸಿ, ಸ್ನೇಹಪರತೆಯಿಂದಿದ್ದರೆ, ಯಾರೂ ಒಂಟಿಯಲ್ಲ, ಎಂಬ ಭಾವನೆ ಬರುತ್ತದೆ.
ಹಿರಿಯರು ಬೇರೆ, ಕಿರಿಯರು ಬೇರೆ, ಆ ಜಾತಿ ಬೇರೆ, ಈ ಜಾತಿ ಬೇರೆ ಎಂಬ ಲೆಕ್ಕಾಚಾರವನ್ನು ಇಬ್ಬರೂ ಹಾಕಿದರೆ ಸಾಮರಸ್ಯವೂ ಸಾಧ್ಯವಿಲ್ಲ. ಇಂದು ಯುವಕ ಸಂಘಗಳು, ಜಾತಿ ಸಂಘಗಳು, ಹಾಗೂ ಹಿರಿಯ ನಾಗರಿಕ ಸಂಘಗಳು ಹೆಚ್ಚಾಗಬೇಕು. ಊರು, ಪಟ್ಟಣ, ಗ್ರಾಮಗಳಲ್ಲಿ ನಡೆಯುವ ದುಷ್ಕೃತ್ಯ, ವೈಮನಸ್ಸು ತಡೆಯಲು ಎಲ್ಲ ಜಾತಿ ಸಂಘಟನೆಗಳು ಒಟ್ಟಾಗಿ ಹೆಜ್ಜೆ ಹಾಕಬೇಕು. ಪ್ರತಿ ತಿಂಗಳೂ ಹಿರಿಯ ನಾಗರಿಕ ಮತ್ತು ಯುವಕ ಸಂಘಗಳು ಹಾಗೂ ಆಯಾ ಜಾತಿ ಸಂಘಗಳು ಜತೆಯಾಗಿ ಮೀಟಿಂಗ್ ಮಾಡುವ ಜರೂರತ್ತಿದೆ.
ನೀವೇನಂತೀರಿ?
Read more: