ನಮ್ಮ ಭಾಷೆ

ಸೆ.22ರಂದು ಬಿ.ತಮ್ಮಯ ಅವರಿಗೆ ಚಾವಡಿ ತಮ್ಮನ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳು ವಿದ್ವಾಂಸರು, ಸಂಶೋಧಕರು, ಸಾಹಿತಿಗಳು, ಕಲಾವಿದರು, ಸಂಘಟಕರಿಗೆ ಕೊಡಮಾಡುವ “ಚಾವಡಿ ತಮ್ಮನ” ಗೌರವಕ್ಕೆ ಈ ಬಾರಿ ಹಿರಿಯ ಸಾಹಿತಿ, ತುಳು ಲಿಪಿ ಶಿಕ್ಷಕ ಬಿ.ತಮ್ಮಯ ಅವರು ಆಯ್ಕೆಯಾಗಿದ್ದಾರೆ. ಬಂಟ್ವಾಳನ್ಯೂಸ್ ನಲ್ಲಿ ಅವರು ಬರೆದ ನಮ್ಮ ಭಾಷೆ ಎಂಬ ಅಂಕಣ ಜನಪ್ರಿಯ.

ಜಾಹೀರಾತು

ಮಂಗಳೂರು ಉರ್ವಸ್ಟೋರ್‌ನಲ್ಲಿರುವ ಅಕಾಡೆಮಿಯ ತುಳುಭವನದ “ಸಿರಿ ಚಾವಡಿಯಲ್ಲಿ” ಬಿ.ತಮ್ಮಯ ಅವರಿಗೆ “ಚಾವಡಿ ತಮ್ಮನ” ಕಾರ್‍ಯಕ್ರಮವು ಸೆ.22ರಂದು ಅಪರಾಹ್ನ 3.30ಕ್ಕೆ ನಡೆಯಲಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ.ಮತ್ತು ಕಾರ್‍ಯಕ್ರಮದ ಸದಸ್ಯ ಸಂಚಾಲಕ ಎ.ಗೋಪಾಲ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಸಾಹಿತಿ ಡಾ.ಏರ್‍ಯ ಲಕ್ಷ್ಮೀನಾರಾಯಣ ಆಳ್ವ ಸನ್ಮಾನಿಸುವರು. ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ.ಹೆಬ್ಬಾರ್ ಬಿ.ತಮ್ಮಯರ ಬಗ್ಗೆ ಅಭಿನಂದನಾ ಭಾಷಣ ಮಾಡುವರು.

ತಮ್ಮಯರ ಪರಿಚಯ:
ವಿದ್ಯಾರ್ಥಿ ಜೀವನದಲ್ಲೇ ನಾಟಕ, ಯಕ್ಷಗಾನ, ತಾಳಮದ್ದಳೆ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಬಿ.ತಮ್ಮಯ ಅವರು ನಾನಾ ಕಡೆಗಳಲ್ಲಿ ಸಂಘಟನೆಗಳನ್ನು ಸ್ಥಾಪಿಸಿ ತುಳು ನಾಟಕಗಳನ್ನು ಬರೆದು ನಟಿಸಿ ನಿರ್ದೇಶಿಸಿ ಪ್ರದರ್ಶಿಸಿದವರು.

ಕಂದಾಯ ಇಲಾಖೆಯಲ್ಲಿ ವೃತ್ತಿ ಬದುಕಿನ ನಡುವೆಯೇ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡ ಇವರು ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಕಾರ್‍ಯದರ್ಶಿಯಾಗಿ- ಅಧ್ಯಕ್ಷರಾಗಿ, ಯುವವಾಹಿನಿಯ ಸಲಹೆಗಾರರಾಗಿ, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಉಪಾಧ್ಯಕ್ಷರಾಗಿ, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಪ್ರಸ್ತುತ “ತುಳುವೆ” ತುಳುಲಿಪಿ ಪತ್ರಿಕೆಯ ಸಂಪಾದಕರಾಗಿ, ಬಂಟ್ವಾಳ ಪಿಂಚಣಿದಾರರ ಸಂಘದ ಅಧ್ಯಕ್ಷರಾಗಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್‌ನ ಗೌರವ ಕಾರ್‍ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಹಣತೆ, ನಾರಾಯಣ ಗುರು ಭಜನೆ, ಚಿಂತನ ಮಂಥನ, ಹಿಂದಿರುಗಿ ನೋಡಿದಾಗ, ಕರಿಕೋಟು, ಕಾಡಿನ ಹಕ್ಕಿ ಹಾಡಿತು, ತಟಪಟ ಹನಿ, ತುಳುವೆರೆ ಪರ್ಬ, ತುಳು ಲಿಪಿ ಕಲ್ಪಿ-ತುಳು ಮೊದಲಾದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಹಲವಾರು ಶಾಲಾ ಕಾಲೇಜು ಮತ್ತು ಸಂಘಟನೆಗಳಲ್ಲಿ ಹಲವಾರು ವರ್ಷಗಳಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಳು ಲಿಪಿ ಕಲಿಸುವ ಮೂಲಕ “ತುಳು ಮಾಸ್ತರ್” ಎನಿಸಿಕೊಂಡಿದ್ದಾರೆ.

Articls related to B.Tammaya

https://bantwalnews.com/category/blogs/%E0%B2%A8%E0%B2%AE%E0%B3%8D%E0%B2%AE-%E0%B2%AD%E0%B2%BE%E0%B2%B7%E0%B3%86/

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts