ಮಕ್ಕಳಲ್ಲಿ ವೈಜ್ಞಾನಿಕ ಅರಿವು ಹೆಚ್ಚಾದಾಗ, ಶೈಕ್ಷಣಿಕ ವಿಚಾರಧಾರೆಗಳ ಗ್ರಹಿಕೆ ಸುಲಭ ಸಾಧ್ಯವಾಗುತ್ತದೆ ಎಂದು ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಳದ ಟ್ರಸ್ಟಿ ಪುರುಷೋತ್ತಮ ಶೆಣೈ ಹೇಳಿದರು.
ಬಂಟ್ವಾಳ ರೋಟರೀ ಕ್ಲಬ್ ನ ಸುವರ್ಣ ವರ್ಷಾಚರಣೆಯ ಅಂಗವಾಗಿ ಬಂಟ್ವಾಳದ ಎಸ್ ವಿಎಸ್ ದೇವಳ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಾಲಾ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ನಂದಿನಿ ಶೆಣೈ ಮಾತನಾಡಿ, ಮಕ್ಕಳ ಶಿಕ್ಷಣ ಹಾಗೂ ವಿಕಾಸದ ದೃಷ್ಟಿಯಲ್ಲಿ ಬಂಟ್ವಾಳ ರೋಟರೀ ಕ್ಲಬ್ ನ ಸೇವಾಕಾರ್ಯ ಶ್ಲಾಘನೀಯ ಎಂದರು. ಶಾಲೆಯ ಹಲವು ಕಾರ್ಯಕ್ರಮಗಳಿಗೆ ಕ್ಲಬ್ ನೀಡುವ ಸಹಕಾರ ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಯಲ್ಲಿ ಸಮಗ್ರ ವಿಕಾಸಕ್ಕೆ ನೆರವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ರೋಟರೀ ಕ್ಲಬ್ ಅಧ್ಯಕ್ಷರೋ. ಮಂಜುನಾಥ ಆಚಾರ್ಯ ಮಾತನಾಡಿ, ರೋಟರೀ ಕ್ಲಬ್ ಸುವರ್ಣ ವರ್ಷಾಚರಣೆಯ ಸಂದರ್ಭಕ್ಕೆ ಪೂರಕವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿದ್ದು, ಕಳೆದೆರಡು ದಿನಗಳ ತಾರಾಲಯ ಸಂಚಾರದಲ್ಲಿ ವೀಕ್ಷಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು. ರೋಟರಿ ಕ್ಲಬ್ ಪದಾಧಿಕಾರಿಗಳಾದ ರಿತೇಶ್ ಬಾಳಿಗಾ, ಸದಾಶಿವ ಬಾಳಿಗಾ, ಮೇಘಾ ಆಚಾರ್ಯ, ವಸಂತ ಪ್ರಭು, ಡಾ.ನಿರಂಜನ ಆಚಾರ್ಯ, ಬೆಂಗಳೂರು ಆರ್ಯಭಟ ತಾರಾಲಯದ ವ್ಯವಸ್ಥಾಪಕರಾದ ಸತೀಶ್, ಲಕ್ಷ್ಮೀಪತಿ ಉಪಸ್ಥಿತರಿದ್ದರು. ಶಿಕ್ಷಕ ಶಿವಾನಂದ ಬಾಳಿಗಾ ಕಾರ್ಯಕ್ರಮ ನಿರ್ವಹಿಸಿದರು.