ಬಂಟ್ವಾಳನ್ಯೂಸ್ ವರದಿ
ಕಾಂಗ್ರೆಸ್ ಸಹಿತ ಹಲವು ಪಕ್ಷಗಳು ಕರೆ ನೀಡಿದ ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗಿನಾದ್ಯಂತ ಬಿ.ಸಿ.ರೋಡ್ ಮತ್ತು ಹಲವು ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೆ, ಕಲ್ಲಡ್ಕದ ಕೆಲವು ಪ್ರದೇಶಗಳಲ್ಲಿ ಎಂದಿನಂತೆಯೇ ಮಳಿಗೆಗಳು ತೆರೆದಿದ್ದವು. ಬಸ್ಸುಗಳು ಇಲ್ಲದ ಕಾರಣ ಜನಸಂಚಾರ ವಿರಳವಿತ್ತು. ಆಟೋ ರಿಕ್ಷಾಗಳು ಎಂದಿನಂತೆಯೇ ಸ್ಟ್ಯಾಂಡ್ ನಲ್ಲಿ ನಿಂತಿದ್ದು, ಕರ್ತವ್ಯ ನಿರ್ವಹಿಸಿದವು.
ಮಾಜಿಯಲ್ಲಿ ಪಿಕಪ್ ವಾಹನ ಚಾಲಕನೋರ್ವನ ಮೇಲೆ ಹಲ್ಲೆ ನಡೆದಿದ್ದು, ಆತ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾನೆ. ಅರುಣ್ ಎಂಬಾತ ಹಲ್ಲೆಗೊಳಗಾದ ಯುವಕ.
ಇದೇ ವೇಳೆ ಬೋಳಂಗಡಿ ಎಂಬಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಪಕ್ಷದ ನಾಯಕರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಘಟನೆ ಬಳಿಕ ಶಾಸಕ ಹಾಗೂ ಪಕ್ಷದ ನಾಯಕರಾದ ಎ.ಗೋವಿಂದ ಪ್ರಭು, ದೇವದಾಸ ಶೆಟ್ಟಿ ಮತ್ತಿತರರು ನೇರವಾಗಿ ಬಂಟ್ವಾಳ ಎಎಸ್ಪಿ ಕಚೇರಿಗೆ ಬಂದು ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದರು. ಇದೇ ವೇಳೆ ಎಸ್ಪಿ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಧರಣಿ ಕುಳಿತರು.
ಈ ಸಂದರ್ಭ ಎಎಸ್ಪಿ ಋಷಿಕೇಶ್ ಸೋನಾವಣೆ ಜೊತೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಕಾಂಗ್ರೆಸ್ ಪಕ್ಷವು ಮಾಜಿ ಸಚಿವರ ನೇತೃತ್ವದಲ್ಲಿ ಬಲಾತ್ಕಾರವಾಗಿ ಬಂದ್ ಮಾಡಿಸುತ್ತಿದೆ. ನನ್ನ ವಾಹನಕ್ಕೆ ಕಲ್ಲು ತೂರಾಟ ಮಾಡಲಾಗಿದೆ. ಸಣ್ಣಪುಟ್ಟ ವಿಚಾರಕ್ಕೂ ಸೇ.144ರನ್ವಯ ನಿಷೇಧಾಜ್ಞೆ ವಿಧಿಸುವ ಸರಕಾರ, ಬಂದ್ ಅನ್ನು ತಾನೇ ಖುದ್ದು ನಿಂತು ಮಾಡಿಸುತ್ತಿದೆ. ಮೆರವಣಿಗೆಗಳನ್ನು ಯಾರ ಅನುಮತಿ ಮೇಲೆ ಮಾಡಿಸಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಬಂದ್ ಗೆ ಸರಕಾರದ ನೇತೃತ್ವದಲ್ಲೇ ಪ್ರಚೋದನೆ ನೀಡಲಾಗುತ್ತಿದೆ. ಬೋಳಂಗಡಿಯಲ್ಲಿ ಉದ್ದೇಶಪೂರ್ವಕವಾಗಿಯೇ ನನ್ನ ಕಾರಿನ ಮೇಲೆ ದಾಳಿ ಮಾಡಲಾಗಿದೆ. ಕಲ್ಲು ಕಾರಿನ ಎಡಭಾಗಕ್ಕೆ ತಾಗಿದ್ದು, ಗಾಜಿಗೇನಾದರೂ ಬಿದ್ದಿದ್ದರೆ ಅಪಾಯವಿತ್ತು. ರಸ್ತೆಯಲ್ಲಿ ಮಾಜಿ ಸಚಿವರು ಎಸ್ಕಾರ್ಟ್ ಜೊತೆ ಸಂಚರಿಸುತ್ತಿದ್ದು, ಬಂದ್ ಮಾಡಿಸುತ್ತಿದ್ದಾರೆ. ಎಂ.ಎಲ್.ಎ.ಗೆ ಇಲ್ಲಿ ಭದ್ರತೆ ಇಲ್ಲ ಎಂದರೆ ಏನರ್ಥ ಎಂದು ರಾಜೇಶ್ ನಾಯ್ಕ್ ಪ್ರಶ್ನಿಸಿದರು.
ಈ ಸಂದರ್ಭ ಮಾತನಾಡಿದ ಗೋವಿಂದ ಪ್ರಭು, ಪೊಲೀಸರು ಬಂದ್ ನಡೆಸುವವರನ್ನು ಬೆಂಬಲಿಸದೆ ಸಾರ್ವಜನಿಕರಿಗೆ ಸುರಕ್ಷತೆ ನೀಡಬೇಕು. ಆದರೆ ಎಂಎಲ್ ಎ ಅವರಿಗೇ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಡಿಸಿ, ಎಸ್ಪಿ ಹೊಣೆ, ಅವರು ಬರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪೊಲೀಸ್ ಠಾಣೆ ಮುಂಭಾಗ ಬಿಜೆಪಿ ಕಾರ್ಯಕರ್ತರೊಂದಿಗೆ ಧರಣಿ ಕುಳಿತರು.
ಶಾಸಕರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದು ಗಂಭೀರ ವಿಚಾರ ಎಂದ ಎಎಸ್ಪಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಬಂದ್ ಗೆ ಬೆಂಬಲಿಸುವಂತೆ ಮನವಿ:
ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳ ಬಿ.ಸಿ.ರೋಡ್ ಪರಿಸರದಲ್ಲಿ ಬಂದ್ ಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್ ನಿಂದ ಅಭಿಯಾನ ನಡೆಯಿತು. ಈ ಸಂದರ್ಭ ಜನಪ್ರತಿನಿಧಿಗಳು, ಪಕ್ಷದ ನಾಯಕರು ಇದ್ದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರಮುಖರಾದ ಪಿ.ಎ.ರಹಿಂ, ಮಹಮ್ಮದ್ ಶಫಿ, ಇಬ್ರಾಹಿಂ ಕೈಲಾರ್ ಮತ್ತಿತರರು ಬಿ.ಸಿ.ರೋಡಿನ ಫ್ಲೈಓವರ್ ಬಳಿ ಪ್ರತಿಭಟನೆ ನಡೆಸಿದರು.