ಬಂಟ್ವಾಳ

ಬಂಟ್ವಾಳ: ಅಕಾಲ ಹಲಸು ಸಂಗಮಕ್ಕೆ ಚಾಲನೆ, ಹಲಸು ಮೌಲ್ಯವರ್ಧನೆಗೆ ಹಲಸು ಪಾರ್ಕ್ – ಶಾಸಕ

ದೇಶದಲ್ಲಿ ರಾಸಾಯನಿಕ ಮಿಶ್ರಣರಹಿತ ಮತ್ತು ಪ್ರಕೃತಿದತ್ತವಾಗಿ ಸಿಗುವ ಆರೋಗ್ಯವರ್ಧಕ ಹಲಸಿನ ಹಣ್ಣು ಆಧುನಿಕತೆಗೆ ತಕ್ಕಂತೆ ಮೌಲ್ಯವರ್ಧನೆಗೊಂಡು ವಿವಿಧ ಖಾದ್ಯ ತಯಾರಿಕೆಗೆ ಬಳಸಿಕೊಳ್ಳಲು ಸಹಕಾರಿ ತೆಂಗು ಪಾರ್ಕಿನಂತೆ ಹಲಸು ಪಾರ್ಕ್ ಆರಂಭಿಸುವ ಅವಶ್ಯಕತೆ ಇದೆ. ಆ ಮೂಲಕ ಕೃಷಿಕರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಯುವಜನರ ನಿರುದ್ಯೋಗ ನಿವಾರಣೆಗೆ ಉದ್ಯಮವಾಗಿ ರೂಪುಗೊಳ್ಳಬೇಕು ಎಂದು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಹೇಳಿದ್ದಾರೆ.

ಜಾಹೀರಾತು

ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಪುತ್ತೂರು ನವಚೇತನ ಸ್ನೇಹ ಸಂಗಮ ಮತ್ತು ಬಂಟ್ವಾಳ ಅಕಾಲ ಹಲಸು ಸಂಗಮ ಸ್ವಾಗತ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ ಎರಡು ದಿನಗಳ ಅಕಾಲ ಹಲಸು ಸಂಗಮ-೨೦೧೮ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಸಮಿತಿ ಗೌರವಾಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಲಸು ಕೇವಲ ಬಡಜನರ ಆಹಾರವಾಗಿರದೆ ಎಲ್ಲರ ಆರೋಗ್ಯ ವೃದ್ಧಿಸುವ ಪೌಷ್ಠಿಕ ಆಹಾರವಾಗಿ ಪರಿವರ್ತನೆಗೊಂಡಿದೆ ಎಂದರು.

ರೋಟರಿ ಕ್ಲಬ್ ಸಹಾಯಕ ಗವರ್ನರ್ ಎನ್.ಪ್ರಕಾಶ ಕಾರಂತ ಮಾತನಾಡಿ, ಪ್ರತೀ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹಲಸು ಸಂಗಮದಂತಹ ಕಾರ್ಯಕ್ರಮಗಳ ಮೂಲಕ ಜನತೆಗೆ ಹಲಸಿನ ವೈಶಿಷ್ಟ್ಯತೆ ಬಗ್ಗೆ ತಿಳಿಸುವ ಮಹತ್ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿ ಜಲ ತಜ್ಞ ಶ್ರೀಪಡ್ರೆ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಜಿ.ಆನಂದ, ಪ್ರಗತಿಪರ ಕೃಷಿಕ ಕೈಯೂರು ನಾರಾಯಣ ಭಟ್ ಶುಭ ಹಾರೈಸಿದರು.

ಜಾಹೀರಾತು

ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಸಮಿತಿ ಪದಾಧಿಕಾರಿಗಳಾದ ನಾ.ಕಾರಂತ ಪೆರಾಜೆ, ಪಾಂಡುರಂಗ ಭಟ್ ಕುದಿಂಗಿಲ, ಮಹಾಬಲೇಶ್ವರ ಹೆಬ್ಬಾರ್, ಮಹೇಶ ಪುಚ್ಚಪಾಡಿ, ಮೋಹನ್ ಕೆ.ಶ್ರೀಯಾನ್ ರಾಯಿ, ಮಧುಸೂದನ ಶೆಣೈ, ಪ್ರಭಾಕರ ಪ್ರಭು, ಸುಭಾಶ್ಚಂದ್ರ ಜೈನ್ ಮತ್ತಿತರರು ಇದ್ದರು.

ಸಮಿತಿ ಸಂಚಾಲಕ ಜಯಾನಂದ ಪೆರಾಜೆ ಸ್ವಾಗತಿಸಿ, ನವಚೇತನ ಸ್ನೇಹ ಸಂಗಮ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಪ್ರಾಸ್ತಾವಿಕ ಮಾತನಾಡಿದರು. ರಾಜ ಬಂಟ್ವಾಳ ವಂದಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

ವಿಶೇಷತೆ: ವಿವಿಧ ಬಗೆಯ ಹಲಸಿನ ಹಣ್ಣು, ವಿವಿಧ ತಳಿಯ ಹಲಸಿನ ಗಿಡಗಳು, ವಿಭಿನ್ನ ಶೈಲಿ ಮತ್ತು ರುಚಿಕರ ಖಾದ್ಯಗಳಾದ ಹಲಸಿನ ಕೇಕ್,
ಹಲ್ವ, ಹಪ್ಪಳ, ಐಸ್‌ಕ್ರೀಂ, ಕಬಾಬ್, ಒಣ ಹಣ್ಣು ಸೊಳೆ, ಒಣ ಕಾಯಿ ಸೊಳೆ, ಬಿರಿಯಾನಿ ಮಿಕ್ಸ್, ಚಾಕೊಲೇಟ್, ಹಲಸಿನ ಹೋಳಿಗೆ, ಹಲಸಿನ ದೋಸೆ, ಪಲ್ಪ್, ಜ್ಯೂಸ್, ಪೋಡಿ, ರೊಟ್ಟಿ, ವರಟ್ಟಿ ಪಸನ್ ಬಾಜಿ, ಹಲಸಿನ ಬೀಜದ ಪಾಯಸ, ಜಾಮೂನು ಪ್ರದರ್ಶನ ಮತ್ತು ಮಾರಾಟ ಭರದಿಂದ ನಡೆಯಿತು. ಪ್ರತಿಷ್ಠಿತ ಸುಜಾತ ಅಡಿಕೆ ಪತ್ರಿಕೆ ಸಹಿತ ವಿವಿಧ ಕೃಷಿ ಪುಸ್ತಕ, ಜಾನಪದ ಶೈಲಿ ಗೃಹೋಪಯೋಗಿ ವಸ್ತುಗಳು, ಯಂತ್ರೋಪಕರಣ ಪ್ರದರ್ಶನ ಕೃಷಿಕರು ಮತ್ತು ಹಲಸು ಪ್ರೇಮಿಗಳ ಗಮನ ಸೆಳೆಯಿತು. ಇಲ್ಲಿನ ಬಿ.ಸಿ.ರೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪದವಿಪೂರ್ವ ಕಾಳೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಶ್ರಮಿಸಿ ಮೆಚ್ಚುಗೆ ಗಳಿಸಿದರು.

ಜಗತ್ತಿನ ಬೇಡಿಕೆಗೆ ತಕ್ಕಷ್ಟು ಹಲಸು ಸಂಸ್ಕರಣೆ ಆಗುತ್ತಿಲ್ಲ: ಶ್ರೀ ಪಡ್ರೆ

ಜಾಹೀರಾತು

ಮಧ್ಯಾಹ್ನ ನಡೆದ ’ಹಲಸಿನ ವಿಶ್ವ ದರ್ಶನ’ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ತಜ್ಞ ಶ್ರೀಪಡ್ರೆ, ಜಗತ್ತಿನಲ್ಲಿ ಭಾರತೀಯ ಹಲಸಿಗೆ ಭಾರೀ ಬೇಡಿಕೆ ಇದ್ದರೂ ಇಲ್ಲಿ ಸಂಸ್ಕರಣೆ ಕೊರತೆಯಿಂದಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಮಾವು ಹಣ್ಣುಗಳ ರಾಜ ಎಂಬುದು ನಿಜ ಆಗಿದ್ದರೂ ಹಲಸು ’ಕಿಂಗ್ ಮೇಕರ್’ ಎಂಬುದು ಅಷ್ಟೇ ಸತ್ಯ. ಕಲ್ಪವೃಕ್ಷದಂತೆ ಎಲ್ಲಾ ರೀತಿಯಿಂದಲೂ ಉಪಯೋಗಕ್ಕೆ ಸಿಗುವ ಹಲಸಿನ ಬಗ್ಗೆ ಕೀಳರಿಮೆ ತೊರೆದು, ಸ್ವಾದಿಷ್ಟಕರ ಮತ್ತು ಆರೋಗ್ಯದಾಯಕ ಹಲಸು ಹಾಗೂ ಹಲಸಿನ ಖಾದ್ಯ ವರ್ಷವಿಡೀ ಮಾರುಕಟ್ಟೆಯಲ್ಲಿ ಸುಗುವಂತೆ ಮಾಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ದೇಶದಲ್ಲಿ ಸಹಕಾರಿ ಮಾದರಿ ಅಥವಾ ಸ್ತ್ರೀಶಕ್ತಿ ಮತ್ತಿತರ ಸಂಘಟನೆಗಳು ಈ ಬಗ್ಗೆ ಆಸಕ್ತಿ ವಹಿಸಿ ಉದ್ಯಮವನ್ನಾಗಿ ರೂಪಿಸಿಕೊಂಡಾಗ ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾಗಲಿದೆ. ಮಾತ್ರವಲ್ಲದೆ ಮುಂದಿನ ಒಂದು ವರ್ಷದೊಳಗೆ ಭಾರತಾದ್ಯಂದ ಹಲಸು ಸಂಸ್ಕರಣೆ ಉದ್ಯಮವಾಗಿ ಪರಿವರ್ತನೆಯಾಗಲಿದೆ ಎಂದರು.

ಜಾಹೀರಾತು

ಈಗಾಗಲೇ ಕೇರಳದಲ್ಲಿ ಗೃಹ ಕೈಗಾರಿಕೆಯಾಗಿ ಹಲಸು ಖಾದ್ಯ ತಯಾರಿ ಮತ್ತು ಸಂಸ್ಕರಣೆ ಉದ್ಯಮ ಯಶಸ್ವಿಯಾಗಿ ನಡೆಯುತ್ತಿದ್ದರೂ ಯಾಂತ್ರೀಕರಣ ವ್ಯವಸ್ಥೆ ಬೆಳವಣಿಗೆ ಆಗಿಲ್ಲ. ಇಂಡೋನೇಶಿಯಾ ದೇಶದಲ್ಲಿ ಮಾತ್ರ ಹಲಸು ಉದ್ಯಮವು ಗರಿಷ್ಟ ಪ್ರಮಾಣದಲ್ಲಿ ಯಾಂತ್ರೀಕರಣಗೊಂಡಿದ್ದು, ಉಳಿದಂತೆ ಮೆಕ್ಷಿಕೋ, ಶ್ರೀಲಂಕಾ ಮತ್ತಿತರ ರಾಷ್ಟ್ರಗಳಲ್ಲಿ ಕೂಡಾ ಹಲಸು ಉದ್ಯಮವಾಗಿ ಬೆಳೆದು ಬಂದಿದೆ. ಮೆಕ್ಷಿಕೋ ಯಾಂತ್ರೀಕರಣಕ್ಕೆ ಸಂಶೋಧನೆ ಮುಂದುವರಿಸಿದ್ದರೆ, ಶ್ರೀಲಂಕಾದಲ್ಲಿ ೫ಸಾವಿರ ಕುಟುಂಬಗಳು ಹಲಸು ತುಂಡರಿಸಿ ಸಂಸ್ಕರಿಸುತ್ತಿದೆ. ಕೇರಳದಲ್ಲಿ ವರ್ಷಕ್ಕೆ ಸುಮಾರು ೩೦ ಲಕ್ಷ ಹಪ್ಪಳ ತಯಾರಿಸುತ್ತಿದ್ದರೂ ಮತ್ತಷ್ಟು ಬೇಡಿಕೆ ಇದೆ. ಹಲಸಿನ ಬೀಜದಿಂದಲೇ ೧೨ ಬಗೆಯ ತಿನಿಸು ತಯಾರಾಗುತ್ತಿದೆ. ಇಲ್ಲಿನ ಎರಡು ಹೋಟೆಲುಗಳಲ್ಲಿ ಅನ್ನ ಹೊರತುಪಡಿಸಿ ಉಳಿದಂತೆ ಎಲ್ಲಾ ಹಲಸಿನ ಖಾದ್ಯವನ್ನೇ ನೀಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹಲಸಿನ ಪಲ್ಪ್ ತಯಾರಿಸಿ ವಿದೇಶಗಳಿಗೆ ರಪ್ತುಗೊಳಿಸುವ ಉದ್ಯಮ ಯಶಸ್ವಿಯಾಗಿದೆ. ಈ ದೇಶದಲ್ಲಿ ೧ ಸಾವಿರ ಹೆಕ್ಟೇರು ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದೆ ಎಂದು ಸರ್ಕಾರಿ ದಾಖಲೆಯಲ್ಲಿ ಕಂಡು ಬಂದಿದ್ದರೂ ಎಲ್ಲಿವೆ…? ಎಂಬ ಪ್ರಶ್ನೆಗೆ ಉತ್ತರ ಇಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.

ಇದೇ ವೇಳೆ ತುಮಕೂರಿನ ಕೃಷಿತಜ್ಞ ಡಾ.ಕರುಣಾಕರ್ ಮಾತನಾಡಿ, ರಾಜ್ಯದಲ್ಲಿ ಕಡಿಮೆ ಮಳೆ ಬೀಳುತ್ತಿರುವ ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ’ಸಿದ್ಧು’ ಎಂಬ ಹೆಸರಿನಲ್ಲಿ ತಲಾ ಎರಡೂವರೆ ಕಿಲೋ ತೂಕದ ಕೆಂಪು ಬಣ್ಣದ ಸೊಳೆ ಹೊಂದಿರುವ ಆಕರ್ಷಕ ಹಲಸು ತಳಿ ಸಿದ್ಧಪಡಿಸಲಾಗಿದ್ದು, ಭಾರೀ ಯಶಸ್ವು ಕಂಡಿದೆ ಎಂದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ