ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯಲ್ಲಿ ಟ್ರಾಫಿಕ್ ದಟ್ಟಣೆ ಇದ್ದಾಗಲೂ ಬೀದಿ ಬದಿ ವ್ಯಾಪಾರಿಗಳು ತರಕಾರಿ ಮಾರಲು ಅನುಮತಿ ಸಿಕ್ಕಿದೆಯೋ ಇಲ್ಲವೋ ಎಂಬ ವಿಚಾರ ಚರ್ಚೆಯಲ್ಲಿದ್ದಂತೆ, ಇಲ್ಲಿನ ತರಕಾರಿ ದರವೂ ಅಂಗಡಿಗಿಂದ ಜಾಸ್ತಿ ಎಂಬ ವಿಚಾರವನ್ನು ಓದುಗರು ಬಂಟ್ವಾಳ ನ್ಯೂಸ್ ಗಮನಕ್ಕೆ ತಂದಿದ್ದಾರೆ.
ಇಲ್ಲಿ ತರಕಾರಿ ಮಾರುವುದರಿಂದ ಖರೀದಿಗಾಗಿ ಸ್ಕೂಟರ್ ಕಾರುಗಳು ನಿಲ್ಲುವುದು, ಅದರಿಂದ ಟ್ರಾಫಿಕ್ ಜಾಮ್ ಉಂಟಾಗುವುದು ಯಾವುದಾದರೂ ವಾಹನಗಳು ಡಿಕ್ಕಿಯಾಗುವುದು ಇನ್ನಿತರ ಸಮಸ್ಯೆಗಳು ಇರುವಂತೆಯೇ ಹೋಗಲಿ ಬಿಡಿ, ಕಡಿಮೆ ರೇಟಿಗೆ ತರಕಾರಿ ಮಾರುತ್ತಾರಲ್ವ, ಎಂದು ಜನಸಾಮಾನ್ಯರೂ ಸುಮ್ಮನಿದ್ದರು. ಆದರೆ ಬಿ.ಸಿ.ರೋಡಿನಲ್ಲಿರುವ ಇತರ ತರಕಾರಿ ಅಂಗಡಿಗಳಲ್ಲಿ ಭಾನುವಾರ ಟೊಮೆಟೋಗೆ 11 ರೂ ಇದ್ದರೆ, ಬೀದಿ ಬದಿ ತರಕಾರಿ ವ್ಯಾಪಾರಿಗಳು 20 ರೂಗೆ ಮಾರುತ್ತಿದ್ದರು ಎಂಬ ವಿಚಾರವನ್ನು ಓದುಗರು ನಮ್ಮ ವೆಬ್ ನ್ಯೂಸ್ ಗಮನಕ್ಕೆ ತಂದಿದ್ದಾರೆ. ಯಾವುದಕ್ಕೂ ಮೊದಲು ಅಂಗಡಿ ಮತ್ತು ಬೀದಿ ಬದಿಯಲ್ಲಿ ರೇಟ್ ಒಮ್ಮೆ ವಿಚಾರಿಸಿ ನೋಡಿ ಎಂದು ಅವರು ತಿಳಿಸಿದ್ದಾರೆ.
ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಸರಿಯಾದ ದರ ನಿಗದಿ ಕುರಿತು ರಾಜಕೀಯ ಪಕ್ಷಗಳೂ ಆಸಕ್ತಿ ವಹಿಸಿದ್ದು, ಇತ್ತೀಚೆಗೆ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಮಾಧ್ಯಮ ಸಂವಾದದಲ್ಲಿ ಪ್ರಸ್ತಾಪವಾಗಿತ್ತು. ಬಿ.ಸಿ.ರೋಡ್ ನ ತರಕಾರಿ ಅಂಗಡಿಗಳಲ್ಲಿ ತರಕಾರಿ ಮಾರುವವರು ಹಾಗೂ ಬೀದಿ ಬದಿಯಲ್ಲಿ ತರಕಾರಿ ಮಾರುವವರು ಮಾರುವುದು ತರಕಾರಿಯನ್ನೇ ಆದರೂ ದರವ್ಯತ್ಯಾಸ ಇಷ್ಟೊಂದು ಇರುತ್ತದಾ ಎಂದು ಓದುಗರು ಕೇಳಿದ್ದಾರೆ.