ಪಠ್ಯದಲ್ಲಿರುವ ಅರಣ್ಯ ರಕ್ಷಣೆಯ ವಿಚಾರವನ್ನು ನೈಜತೆಗೆ ತರುವ ನಿಟ್ಟಿನಲ್ಲಿ ಹಸಿರು ಕರ್ನಾಟಕ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮಾಲಿನ್ಯ ನಡೆಯುತ್ತಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಪೂರ್ವಿಕರಿಂದ ಬಂದ ಅರಣ್ಯ ಎಂಬ ಬಳುವಳಿಯನ್ನು ಮುಂದಿನ ಜನಾಂಗಕ್ಕೆ ನೀಡಬೇಕು ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಬಿ. ಹೇಳಿದರು.
ಬಂಟ್ವಾಳ ತಾಲೂಕಿನ ವೀರಕಂಬ ಸಿರಿಚಂದನ ವನದಲ್ಲಿ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು, ಬಂಟ್ವಾಳ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಪ್ರಾದೇಶಿಕ ವಲಯ ಮತ್ತು ವೀರಕಂಬ ಗ್ರಾಮ ಅರಣ್ಯ ಸಮಿತಿ ಇವರ ಸಹಭಾಗಿತ್ವದಲ್ಲಿ ನಡೆದ ಹಸಿರು ಕರ್ನಾಟಕ -೨೦೧೮ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ತಾಲೂಕಿನ ಮೊತ್ತಮೊದಲ ವಿದ್ಯಾಸಂಸ್ಥೆ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಸಹಯೋಗದೊಂದಿಗೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಮೊದಲ ಕಾರ್ಯವಾಗಿ ನಡೆಯಿತು. ಈ ಕಾರ್‍ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆ, ಅರಣ್ಯದಿಂದಾಗುವ ಲಾಭಗಳು ಹಾಗೆಯೇ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಪಡೆದುಕೊಳ್ಳುವುದು ಹೇಗೆ ಎಂಬ ವಿಚಾರದ ಕುರಿತು ಮಾಹಿತಿ ನೀಡಿದರು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಮರಗಳ ಬೀಜ ವಿತರಣೆ ಮಾಡಿದರು. ಸಿರಿ ಚಂದನ ವನದಲ್ಲಿ ವಿದ್ಯಾರ್ಥಿಗಳಿಂದ ಅರಣ್ಯ ವೀಕ್ಷಣೆ ಜತೆ ಬೇರೆ ಬೇರೆ ವಿಧದ ಮರಗಳ ಬೀಜಬಿತ್ತನೆ ನಡೆಯಿತು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜುಗಳ ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ವಲಯ ಉಪ ಅರಣ್ಯಾಧಿಕಾರಿ ಯಶೋಧರ, ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್, ಉಪಪ್ರಾಂಶುಪಾಲೆ ಡಾ. ಸುಜಾತ ಹೆಚ್ ಆರ್., ವೀರಕಂಬ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ದೀಲಿಪ್ ಕುಮಾರ್ ಶೆಟ್ಟಿ, ಬಂಟ್ವಾಳ ವಲಯ ಅರಣ್ಯ ರಕ್ಷಕರಾದ ದಯಾನಂದ, ಜಿತೇಶ್, ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕಿ ಭಾರತೀ ಭಟ್, ಎನ್‌ಸಿಸಿ ಘಟಕದ ಅಧಿಕಾರಿ ಲೆ. ಸುಂದರ್, ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಕಿಟ್ಟು ರಾಮಕುಂಜ ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ವಿಜ್ಞಾನ ವಿಭಾಗ, ಎನ್‌ಸಿಸಿ ಘಟಕ, ಮತ್ತು ಎನ್‌ಎಸ್‌ಎಸ್ ಘಟಕದ ಸುಮಾರು 100ಕ್ಕೂ ಅಧಿಕ ವಿದ್ಯಾರ್ಥಿಗಳು, ಸುಮಾರು ಕಾಲೇಜಿನ 20 ಉಪನ್ಯಾಸಕರು ಭಾಗವಹಿಸಿದರು.
ವಿದ್ಯಾರ್ಥಿನಿ ಪ್ರಿಯಾಂಕ ಪೈ ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಘಟಕದ ಯೋಜನಾಧಿಕಾರಿ ಡಾ| ಮಂಜುನಾಥ ಉಡುಪ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮತ್ತು ಕಾರ್‍ಯಕ್ರಮ ಸಂಯೋಜಕ ಪ್ರದೀಪ್ ಪೂಜಾರಿ ವಂದಿಸಿ, ಕನ್ನಡ ಉಪನ್ಯಾಸಕ ಮತ್ತು ಕಾರ್‍ಯಕ್ರಮ ಸಂಯೋಜಕ ಚೇತನ್ ಮುಂಡಾಜೆ ಕಾರ್‍ಯಕ್ರಮ ನಿರೂಪಿಸಿದರು.