ಕೊನೇ ಕ್ಷಣದ ಅಪ್ ಡೇಟ್ ಗಳೊಂದಿಗೆ ತಾಜಾ ಸುದ್ದಿ.. – ಸಂಪಾದಕ: ಹರೀಶ ಮಾಂಬಾಡಿ
ಮಂಗಳವಾರ ದಿನವಿಡೀ ಪೂರ್ಣಪ್ರಮಾಣದ ಮಳೆ ಹಾಗೂ ನೇತ್ರಾವತಿ ನದಿ ಸಮೃದ್ಧವಾಗಿ ಉಕ್ಕಿ ಹರಿದ ಪರಿಣಾಮ, ಬಂಟ್ವಾಳದ ಸುತ್ತಮುತ್ತಲಿನ ಪ್ರದೇಶಗಳು ಮುಳುಗಡೆಯಾಗಿದ್ದು, ಹಲವು ಮನೆಗಳು ಅಪಾಯದ ಅಂಚಿನಲ್ಲಿವೆ. ನೇತ್ರಾವತಿ ನದಿ ನೀರಿನ ಮಟ್ಟ ರಾತ್ರಿ 10 ಗಂಟೆಯ ವೇಳೆ 10.2 ಎಂದು ದಾಖಲಿಸಲಾಗಿದ್ದು, ಇದು ಮತ್ತಷ್ಟು ಏರುವ ಅಪಾಯದಲ್ಲಿದೆ.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂದೆ ರಾತ್ರಿ 9-52 ಕ್ಕೆ ನೇತ್ರಾವತಿ ಮತ್ತು ಕುಮಾರಧಾರಾ ನದಿ ನೀರಿನ ಸಂಗಮವಾಯಿತು. ಈ ಹಿಂದೆ 2013 ಜುಲಾಯಿ 4 ಮತ್ತು ಅದಕ್ಕೂ ಮುನ್ನ 2008 ಆಗಸ್ಟ್ 13 ರಂದು ಆಗಿತ್ತು. ಈ ಸಂದರ್ಭ ದೇವಳದಲ್ಲಿ ಗಂಗಾಪೂಜೆ ನಡೆಯಿತು.
ಘಟ್ಟ ಪ್ರದೇಶಕ್ಕೆ ತೆರಳುವ ಎಲ್ಲ ಮಾರ್ಗಗಳಲ್ಲಿ ರಾತ್ರಿ ಸಂಚಾರ ಆತಂಕಕಾರಿಯಾಗಿದೆ. ಶಿರಾಡಿ ಘಾಟ್ ನಲ್ಲಿ ಈಗಲೂ ಗುಡ್ಡ ಕುಸಿತವಾಗುತ್ತಿದ್ದರೆ, ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದಿದೆ. ಇತರ ರಸ್ತೆ ಸಂಚಾರವೂ ಸುಲಭವಾಗಿಲ್ಲ. ಒಂದು ರೀತಿಯಲ್ಲಿ ಬೆಂಗಳೂರು – ಮಂಗಳೂರು ಸಂಚಾರ ಸದ್ಯಕ್ಕಂತೂ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚನೆಯಂತೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮೂರು ಕಡೆ ಗಂಜಿಕೇಂದ್ರ ಸ್ಥಾಪಿಸಲು ನಿರ್ದೇಶಿಸಿದ್ದು, ನಾವೂರು, ಪಾಣೆಮಂಗಳೂರು ಮತ್ತು ಬಂಟ್ವಾಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 10 ಗಂಟೆಗೆ ತುರ್ತು ಸ್ಥಿತಿ ನಿಭಾಯಿಸಲು ಸಭೆಯನ್ನೂ ನಡೆಸಿದ್ದು, ಪರಿಸ್ಥಿತಿ ಎದುರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ತುಂಬೆ, ಎಎಂಆರ್ ಅಣೆಕಟ್ಟಿನಿಂದ ಎಲ್ಲ ದ್ವಾರಗಳಲ್ಲೂ ನೀರು ಹೊರಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ನೆರೆ ಎದುರಿಸಲು ಸಕಲ ಸಿದ್ಧತೆ, ಸರಳ ಸ್ವಾತಂತ್ರ್ಯ ದಿನಾಚರಣೆಗೆ ಸೂಚನೆ
ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಳಯಸದೃಶ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲೆಗಳಲ್ಲಿ ಸಾಂಕೇತಿಕವಾಗಿ ನಡೆಸುವಂತೆ ಸೂಚಿಸಲಾಗಿದೆ. ಮಕ್ಕಳ ಕಡ್ಡಾಯ ಹಾಜರಾತಿ ಬೇಕಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚಿಸಿದ್ದಾರೆ.
ಮಳೆಯಿಂದಾಗುವ ಹಾನಿಯನ್ನು ತಪ್ಪಿಸಲು ಪ್ರತಿಯೊಬ್ಬರೂ ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದವರು ಮನವಿ ಮಾಡಿದರು.
ಮಂಗಳವಾರ ಮಧ್ಯಾಹ್ನ ಬಂಟ್ವಾಳ ತಾಲೂಕು ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆಈ ಸೂಚನೆ ನೀಡಿದರು. ಬಂಟ್ವಾಳದ ನೆರೆ ನಿರಾಶ್ರಿತರಿಗೆ ಹಾಗೂ ಅಪಾಯದಲ್ಲಿರುವ ಕುಟುಂಬಗಳಿಗೆ ಪಾಣೆಮಂಗಳೂರಿನ ಶಾರದಾ ಶಾಲೆಯಲ್ಲಿ ಗಂಜಿಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಗೂಡಿನ ಬಳಿ, ಕಂಚಿಕಾರ ಪೇಟೆ, ಆಲಡ್ಕ, ಮಿಲಿಟರಿ ಗ್ರೌಂಡ್ ನ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಮುಳುಗಡೆಯಾಗಿರುವ ಮನೆಗಳ ವಿವರ ಪಡೆದ ಅವರು, ನೆರೆ ಭೀತಿ ಇರುವ ಮನೆಗಳನ್ನು ತಕ್ಷಣ ಖಾಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ ಸ್ಥಳೀಯರ ಜೊತೆ ಮಾತನಾಡಿದ ಜಿಲ್ಲಾಧಿಕಾರಿಯವರು, ಮುಂದಿನ ಎರಡು ಮೂರು ದಿನಗಳ ಕಾಲ ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮನೆಗಳನ್ನು ತೆರವು ಗೊಳಿಸಿ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯಿರಿ, ಅವಶ್ಯಕತೆ ಇದ್ದರೆ, ಜಿಲ್ಲಾಡಳಿತ ತೆರೆದಿರುವ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆಯಿರಿ ಹಾಗೂ ಪ್ರಾಕೃತಿಕ ವಿಕೋಪದಿಂದ ಆಗುವ ಹಾನಿಯನ್ನು ತಪ್ಪಿಸಲು ಅಧಿಕಾರಿಗಳ ಜೊತೆ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು. ಈ ಭಾಗದ ಜನರು ನೆರೆಯ ಬಗ್ಗೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.
ಪಾಣೆಮಂಗಳೂರು, ಬಡ್ಡಕಟ್ಟೆ, ಮಿಲಿಟರಿ ಗ್ರೌಂಡ್, ಆಲಡ್ಕ, ಜಕ್ರಿಬೆಟ್ಟು ಬಸ್ತಿಪಡ್ಪು, ಕಂಚಿಕಾರ ಪೇಟೆ, ನಂದಾವರ, ಸಜೀಪಮುನ್ನೂರು ಮೊದಲಾದೆಡೆ ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು ಇನ್ನು ನೆರೆ ಹೆಚ್ಚಾಗುವ ಸಾಧ್ಯತೆಯಿದ್ದು, ಮುಂಜಾಕೃತಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ತಾಲ್ಲೂಕು ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ಉಪತಹಶೀಲ್ದಾರ್ ರಾಜೇಶ್ ನಾಯ್ಕ್ , ಪಾಣೆಮಂಗಳೂರು ಹೋಬಳಿ, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ , ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ , ಪ್ರಕೃತಿ ವಿಕೋಪ ಅಧಿಕಾರಿ ವಿಷು ಕುಮಾರ್ , ಸಿಬಂದಿ ಸದಾಶಿವ ಕೈಕಂಬ. ಶೀತಲ್, ಲಕ್ಷ್ಮಣ್ ಸುಂದರ, ಸಿಬಂದಿ ಯಶೋದ, ಬಂಟ್ವಾಳ ನಗರ ಠಾಣಾ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.
ಬಂಟ್ವಾಳ ಹಳೇ ಪ್ರವಾಸಿ ಮಂದಿರ, ಪಾಣೆಮಂಗಳೂರು ಶಾರದಾ ಹೈಸ್ಕುಲು ಮತ್ತು ನಾವೂರು ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಕಾರ್ ಸೇರಿದಂತೆ ತಾಲೂಕಿನ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್, ಸಣ್ಣಪುಟ್ಟ ಅಪಘಾತಗಳು ಉಂಟಾದವು.