ಬಂಟ್ವಾಳ

ಮನೆ ಬಾಗಿಲು ಬಡಿದು ಹಲ್ಲೆ ನಡೆಸಿ ಬಂಗಾರದ ಸರ ಕದ್ದೊಯ್ದ ಅಪರಿಚಿತರು

  • ಮೊಡಂಕಾಪುವಿನಲ್ಲಿ ಬುಧವಾರ ರಾತ್ರಿ ನಡೆದ ಘಟನೆ, ಜನತೆಯಲ್ಲಿ ಆತಂಕ

ಬಾಗಿಲು ಬಡಿದ ಸದ್ದು ಕೇಳಿ ಮನೆಯೊಡೆಯ ಬಾಗಿಲು ತೆಗೆಯುವ ಹೊತ್ತಿಗೆ ಆಗಂತುಕರು ಮಾರಕಾಯುಧಗಳಿಂದ ಹಣೆಗೆ ಹೊಡೆದು ಸುಲಿಗೆ ಮಾಡಿ ಆತಂಕ ಸೃಷ್ಟಿಸಿದ ಘಟನೆ ಬಂಟ್ವಾಳ ತಾಲೂಕಿನ ಮೊಡಂಕಾಪುವಿನಲ್ಲಿ ಬುಧವಾರ ರಾತ್ರಿ ನಡೆದಿದೆ.

ಘಟನೆಯ ಸ್ಥಳಕ್ಕೆ ಬಂಟ್ವಾಳ ವೃತ್ತನಿರೀಕ್ಷಕ ಟಿ.ಡಿ. ನಾಗರಾಜ್, ಎಸ್.ಐ. ಚಂದ್ರಶೇಖರ್, ಅಪರಾಧ ವಿಭಾಗ ಎಸ್.ಐ. ಹರೀಶ್, ಗ್ರಾಮಾಂತರ ಠಾಣೆ ಎಸ್.ಐ. ಪ್ರಸನ್ನ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

ಶಾಸಕ ಸೂಚನೆ:

ಜನವಸತಿ ಇರುವ ಪ್ರದೇಶದಲ್ಲೇ ಇಂಥ ಘಟನೆ ನಡೆದಿರುವುದು ದುರದೃಷ್ಟಕರ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಹಾಗೂ ಇಂಥ ಕೃತ್ಯಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಿಳಿಸಿದ್ದಾರೆ.

ನಡೆದದ್ದೇನು?

ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ (58) ಎಂಬವರು ಮೊಡಂಕಾಪು ಕಾರ್ಮೆಲ್ ಕಾಲೇಜು ಬಳಿ ಇರುವ ತನ್ನ ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ರಾತ್ರಿ ಸುಮಾರು 9.30ರ ಆಸುಪಾಸಿಗೆ ಅವರ ಪತ್ನಿ ಬಾತ್ ರೂಮ್ ಗೆ ತೆರಳಿದ್ದ ವೇಳೆ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಮಗ ಬಂದಿರಬಹುದು ಎಂದು ಭಾವಿಸಿ ಹೊಳ್ಳ ಅವರು ಬಾಗಿಲು ತೆಗೆದ ಸಂದರ್ಭ ಏಕಾಏಕಿ ಅಪರಿಚಿತರು ಹೊಳ್ಳ ಅವರ ತಲೆಗೆ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು ಮೂರು ಪವನ್ ಅಂದಾಜಿನ ಬಂಗಾರದ ಸರ ಕಿತ್ತುಕೊಂಡಿದ್ದಾರೆ. ಈ ಸಂದರ್ಭ ಬೊಬ್ಬೆ ಕೇಳಿ ಪತ್ನಿ ಆತಂಕಿತರಾಗಿದ್ದು, ಆಗಂತುಕರು ಮನೆಯನ್ನಿಡೀ ಜಾಲಾಡಿ ತೆರಳಿದ್ದಾರೆ. ಹೊಳ್ಳ ಅವರ ಪತ್ನಿ ಸಹಾಯಕ್ಕಾಗಿ ಬೊಬ್ಬೆ ಹೊಡೆದು ಸುತ್ತಮುತ್ತಲಿನವರಿಗೆ ವಿಷಯ ತಿಳಿದಿದ್ದು, ಬಳಿಕ ಹೊಳ್ಳರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಕೈಕಂಬ ಕ್ರಾಸ್ ನಿಂದ ಪೊಳಲಿ ಮಾರ್ಗದ ಕಡೆಗೆ ಹೋಗುವ ದಾರಿಯಲ್ಲಿ ಹೊಳ್ಳ ಅವರ ಮನೆ ಇದೆ. ಕೂಗಳತೆಯ ದೂರದಲ್ಲೇ ಬೇರೆ ಮನೆಗಳು ಇದ್ದರೂ ಕಳವು ಮಾಡಲು ಆಗಮಿಸಿದವರು ನಿರಾತಂಕವಾಗಿ ಕೃತ್ಯ ಎಸಗಿರುವುದು ಬಿ.ಸಿ.ರೋಡ್, ಪರಿಸರದ ಜನರಲ್ಲಿ ಆತಂಕ ತಂದಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts