2018, ಜುಲೈ 10ರವರೆಗೆ ಸಹಕಾರಿ ಸಂಸ್ಥೆಗಳ ಮೂಲಕ ಕೃಷಿ ಸಾಲ ಪಡೆದ ರೈತರ 1 ಲಕ್ಷ ರೂ ವರೆಗಿನ ಚಾಲ್ತಿ ಸಾಲ ಮನ್ನಾ ಮಾಡುವುದಾಗಿ ಸಿಎಂ ಘೋಷಿಸಿದ್ದರೂ ಬೆಲೆ ಇಲ್ಲದಂತಾಗಿದೆ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ ಮತ್ತು ಮುಖ್ಯಮಂತ್ರಿಯಾಗಿ ನೀಡಿದ ಭರವಸೆಯಂತೆ ಬಜೆಟ್ ಅಧಿವೇಶನದಲ್ಲಿ ಚರ್ಚೆಗೆ ಉತ್ತರಿಸಿದ ಸಿಎಂ. 2018 ಜುಲೈ 10ರವರೆಗೆ ಸಹಕಾರಿ ಸಂಸ್ಥೆಗಳ ಮೂಲಕ ಕೃಷಿ ಸಾಲ ಪಡೆದ ರೈತರ ಒಂದು ಲಕ್ಷದವರೆಗಿನ ಚಾಲ್ತಿ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಘೋಷಣೆಯಿಂದಾಗಿ ಜುಲೈ ೧೦ರವರೆಗಿನ ಬೆಳೆ ಸಾಲ ಪಡೆದ ರೈತರೂ ಸಹ ಸಾಲ ಮನ್ನಾ ನಿರೀಕ್ಷೆಯಲ್ಲಿದ್ದರು. ಆದರೆ ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಸಹಕಾರ ಸಂಘಗಳ ಅಪರ ನಿಬಂಧಕರು ಜುಲೈ ೬ರಂದು ಆರ್ಥಿಕ ಇಲಾಖೆಯ ಸೂಚನೆಯಂತೆ ಪತ್ರದಲ್ಲಿ ಕೋರಿರುವ ಮಾಹಿತಿಯಲ್ಲಿ ಜೂನ್ ೨೧ರಿಂದ ಜೂನ್ ೩೦ವರೆಗೆ ರೈತರು ಪಡೆದ ಸಾಲದ ವಿವರ ಕೇಳಿದೆ. ಇದು ಬಜೆಟ್ ನಲ್ಲಿ ಮಾಡಿದ ಘೋಷಣೆ ದಿನಾಂಕಕ್ಕೆ ವ್ಯತಿರಿಕ್ತವಾಗಿರುತ್ತದೆ. ಅಧಿವೇಶನ ಸಂದರ್ಭ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ್ದಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಪ್ರಭು ತಿಳಿಸಿದ್ದಾರೆ.
೨೦೧೮ ಜುಲೈ ೧೦ರವರೆಗಿನ ಬೆಳೆ ಸಾಲ ಪಡೆದ ರೈತರು ಕಂಗಾಲಾಗಿದ್ದು,. ೨೦೧೮ ಜುಲೈ ೧೦ರವರೆಗಿನ ರೈತರು ಪಡೆದ ೧ ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ ಮಾಡಲು ಆರ್ಥಿಕ ಇಲಾಖೆಗೆ ಸೂಚಿಸಲು ಅವರು ವಿನಂತಿಸಿದ್ದಾರೆ.