ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ನಡೆಸುವ ಗ್ರಾಮೋತ್ಸವ ಸಮಾಜೋತ್ಸವವಾಗಿದೆ. ಇದು ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಿದ್ದು, ಸಮಾಜದಿಂದ ಸಮಾಜಕ್ಕೆ ನೀಡುವ ಸಂದೇಶ ಹಾಗೂ ಸಾಮಾಜಿಕ ಚಿಂತನೆಯ ಮನೋಭಾವ ಬೆಳೆಸುವ ಹಬ್ಬವಾಗಿ ಪರಿವರ್ತನೆಯಾಗಿದೆ ಎಂದು ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಹೇಳಿದರು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಸಭಾಗೃಹದಲ್ಲಿ ಮಂಗಳವಾರ ಸಂಜೆ ನಡೆದ ಗ್ರಾಮೋತ್ಸವ ಹಿನ್ನೆಲೆಯಲ್ಲಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 8ರಂದು ಬುಧವಾರ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವವನ್ನು ಗುರುವಂದನೆಯೊಂದಿಗೆ ಗ್ರಾಮೋತ್ಸವವಾಗಿ ಆಚರಿಸಲಾಗುತ್ತದೆ. ಈ ಸಂದರ್ಭ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ, ಶ್ರೀ ಗ್ರಾಮವಿಕಾಸ ಯೋಜನೆಯ ಮೂರು ಜಿಲ್ಲೆಗಳ ಎಲ್ಲ ಸಮಿತಿಗಳು ಸಕ್ರಿಯವಾಗಿ ಪಾಲ್ಗೊಂಡು ಜನಸಾಮಾನ್ಯರೂ ಇದರಲ್ಲಿ ಭಾಗವಹಿಸಲು ಪ್ರೇರೇಪಣೆ ನೀಡಲಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಸ್ವಾಗತ ಸಮಿತಿಯ ಪದಾಧಿಕಾರಿ ವಾಸುದೇವ ಆರ್. ಕೊಟ್ಟಾರಿ, ಅಹಂಕಾರ ಬಿಟ್ಟು ಓಂಕಾರದ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಒಡಿಯೂರು ಕ್ಷೇತ್ರ ಪ್ರೇರಣೆ ನೀಡುತ್ತಿದೆ ಎಂದು ಹೇಳಿದರು.
ಧರ್ಮಜಾಗೃತಿ ಪ್ರತಿಷ್ಠಾನ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಮಾತನಾಡಿ, ಗ್ರಾಮೋತ್ಸವದಲ್ಲಿ ತನು, ಮನ ಮತ್ತು ಧನಸಹಕಾರದೊಂದಿಗೆ ಪಾಲ್ಗೊಳ್ಳುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಉಪಾಧ್ಯಕ್ಷ ಮಂಜು ವಿಟ್ಲ, ಪ್ರಧಾನ ಕಾರ್ಯದರ್ಶಿ ಸದಾಶಿವ ಅಳಿಕೆ, ಪ್ರಧಾನ ಕೋಶಾಧಿಕಾರಿ ಬಿ.ಕೆ.ಚಂದ್ರಶೇಖರ್, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ಆನಂದ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ವ್ಯವಸ್ಥಾಪಕಿ ಸೌಮ್ಯ, ಪ್ರಮುಖರಾದ ಪ್ರಭಾಕರ ಪ್ರಭು, ಸರಪಾಡಿ ಅಶೋಕ ಶೆಟ್ಟಿ, ಎಚ್.ಕೆ.ನಯನಾಡು, ಶಿವಶಂಕರ್, ಜಯಂತ್ ಜೆ. ಕೋಟ್ಯಾನ್ ಉಪಸ್ಥಿತರಿದ್ದರು. ಇದೆ ಸಂದರ್ಭ ಗ್ರಾಮೋತ್ಸವ ಆಮಂತ್ರಣ ಪತ್ರಿಕೆಯನ್ನು ನಾನಾ ಸಮಿತಿ ಪದಾಧಿಕಾರಿಗಳಿಗೆ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮಂಜು ವಿಟ್ಲ ವಂದಿಸಿದರು.