ಮನಸ್ಸುಗಳಲ್ಲಿ ಅನೇಕ ರೀತಿ. ಒಂದರಂತೆ ಇನ್ನೊಂದಿಲ್ಲ. ಒಂದೇ ಮನಸ್ಸು ಒಮ್ಮೆ ಇದ್ದಂತೆ ಇನ್ನೊಮ್ಮೆ ಇರುವುದಿಲ್ಲ. ಮನಸ್ಸುಗಳನ್ನು, ಅವುಗಳ ರೀತಿಯನ್ನು ಅರಿಯುತ್ತಾ ಹೋದಂತೆ ಯಾವುದೂ ಅಸಹಜವಲ್ಲ ಅನಿಸುತ್ತದೆ. ಅಂತೆಯೇ ಅವುಗಳ ಬಗೆಗಿನ ಯೋಚನೆ ಸ್ಥಿತಿ, ಅನುಭವಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು, ತಿಳಿದುಕೊಳ್ಳುತ್ತಾ ಹೋದಾಗ ಬೇರೆ ಬೇರೆ ಮನಸ್ಸುಗಳನ್ನು ಅವಿರುವಂತೆಯೇ ಒಪ್ಪಿಕೊಳ್ಳುವುದು ಹೇಗೆಂದು ನಮಗೆ, ತಿಳಿಯುತ್ತಾ ಹೋಗಬಹುದು. ಸಮಾಜವಾಗಿ ಮನಸ್ಸುಗಳ ಅನೇಕತೆಯನ್ನು ಸಂಭ್ರಮಿಸುವ ಅರಿವು ಮೂಡಬಹುದು
ಈ ನಿಟ್ಟಿನಲ್ಲಿ ಸುರತ್ಕಲ್‌ನ ಚಿರಂತನ ಚ್ಯಾರಿಟೇಬಲ್ ಟ್ರಸ್ಟ್, ಒಂದು ಸಾರ್ವಜನಿಕ ಮುಕ್ತ ಸಂವಾದ ಸರಣಿಯನ್ನು ಆಯೋಜಿಸಲು ಮುಂದಾಗಿದೆ. ಮೊದಲನೆಯ ಸಂವಾದ ಕಾರ್ಯಕ್ರಮವು ಶನಿವಾರ ದಿನಾಂಕ 21, ಸಂಜೆ 4 ರಿಂದ 6 ಗಂಟೆಯ ತನಕ ದಕ್ಷಿಣ ಕನ್ನಡದ ಪುತ್ತೂರಿನ ಕೋರ್ಟ್ ರಸ್ತೆಯ ಬ್ಲಡ್‌ಬ್ಯಾಂಕ್ ಬಳಿಯಿರುವ ಅನುರಾಗ ವಠಾರದಲ್ಲಿ ನಡೆಯಲಿದೆ.
ಆ ದಿನ ಸಂವಾದದಲ್ಲಿ ಹಿರಿಯ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿಯವರು ಅಲ್ಲದೆ ಮನೋಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನಗಳನ್ನು ಮಾಡಿರುವ, ಬೆಂಗಳೂರಿನಲ್ಲಿ ಕೌನ್ಸೆಲರ್ ಆಗಿ ಕೆಲಸ ಮಾಡುತ್ತಿರುವ, ಮೈತ್ರಿ ಭಟ್ ಹಾಗೂ ಉಜಿರೆಯ ಎಸ್ ಡಿ ಎಮ್ ಕಾಲೇಜಿನಲ್ಲಿ ಮನೋಶಾಸ್ತ್ರದ ಉಪನ್ಯಾಸಕಿಯಾಗಿರುವ ನವ್ಯಶ್ರೀ ಜಿ ಸಿ ಪಾಲ್ಗೊಳ್ಳುತ್ತಿದ್ದಾರೆ.
ಈ ಸರಣಿಯಲ್ಲಿ ಇನ್ನೂ ಅನೇಕರು ಸಂವಾದಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಸಂಗೀತ, ಕತೆ, ಚಿತ್ರ, ನಾಟಕ, ಸಿನಿಮಾಗಳ ಮೂಲಕ ಮನಸ್ಸುಗಳ ಬಗ್ಗೆ, ಮನಸ್ಸುಗಳಿಂದಲೇ ನಿರ್ಮಿತವಾದ ಸಮಾಜದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಗಳಿವೆ. ಇದು ಸಾರ್ವಜನಿಕ ಕಾರ್ಯಕ್ರಮ. ಎಲ್ಲರಿಗೂ ಮುಕ್ತ ಆಮಂತ್ರಣ.