ಗೃಹ ರಕ್ಷಕ ದಳದ ವತಿಯಿಂದ ವರ್ಷಕ್ಕೆ ಒಂದು ಸಾವಿರ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ ಎಂದು ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ಅವರು ಹೇಳಿದರು.
ಗೃಹ ರಕ್ಷಕ ದಳದ ವತಿಯಿಂದ ಶುಕ್ರವಾರ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲಾ ವಠಾರದಲ್ಲಿ ನಡೆದ ವನಮಹೋತ್ಸವ ಹಾಗೂ ಪರಿಸರ ಸಂರಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗೃಹ ರಕ್ಷಕ ಸಿಬ್ಬಂದಿಗೆ ತಲಾ ಒಂದು ಗಿಡದಂತೆ, ಪ್ರತಿಯೊಂದು ಸಿಬ್ಬಂದಿಗೂ ಗಿಡ ನೆಟ್ಟು ಪೋಷಿಸುವ ಜಬಾಬ್ದಾರಿ ನೀಡಲಾಗಿದೆ. ಈ ಅಭಿಯಾನ ಜಿಲ್ಲೆಯ ಪ್ರತೀ ತಾಲೂಕು ಕೇಂದ್ರದಲ್ಲೂ ನಡೆಯಲಿದೆ ಎಂದವರು ತಿಳಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಮಿನಿ ವಿಧಾನ ಸೌಧದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದ ಕಮಾಂಡೆಂಟ್ ಡಾ. ಚೂಂತೂರು, ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದರು. ಗೃಹ ರಕ್ಷಕ ಸಿಬ್ಬಂದಿಗಳು ಕರ್ತವ್ಯದ ಅವಧಿ ವೇಳೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಟಿಕೇಟ್ ನೀಡಲಾಗುತ್ತಿದೆ ಎಂದು ಸಿಬ್ಬಂದಿಗಳು ಸಮಸ್ಯೆಯನ್ನು ವಿವರಿಸಿದರು. ಇದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಸಮವಸ್ತ್ರ ಧರಿಸಿ ಪ್ರಯಾಣಿಸುವ ಸಂದರ್ಭದಲ್ಲಿ ಗೃಹರಕ್ಷಕ ಸಿಬ್ಬಂದಿಗಳಿಗೆ ಉಚಿತ ಪ್ರಯಾಣಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ಆದರೂ ಈ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ವಸತಿ ಶಾಲಾ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಗೃಹ ರಕ್ಷಕ ದಳದ ಘಟಕಾಧಿಕಾರಿ ಬಿ.ಆರ್.ಶ್ರೀನಿವಾಸ ಆಚಾರ್ಯ, ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್, ಪತ್ರಕರ್ತ ಫಾರೂಕ್ ಬಂಟ್ವಾಳ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.