ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬಪ್ಪನಾಡು ಮೇಳದ ಕಲಾವಿದ ರಾಜೇಂದ್ರಕೃಷ್ಣ ಸಂಯೋಜನೆಯಲ್ಲಿ ಜುಲೈ 1ರಂದು ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ನಡೆದ ಹಗಲು ಯಕ್ಷಗಾನ ಸೇರಿದ್ದ ನೂರಾರು ಯಕ್ಷಪ್ರೇಮಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ರವಿಚಂದ್ರ ಕನ್ನಡಿಕಟ್ಟೆ, ಪ್ರಫುಲ್ಲಚಂದ್ರ ನೆಲ್ಯಾಡಿ, ಗಿರೀಶ್ ರೈ ಕಕ್ಯಪದವು, ಪದ್ಯಾಣ ಗಣಪತಿ ಭಟ್, ಕುರಿಯ ಗಣಪತಿ ಶಾಸ್ತ್ರಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ದಿನೇಶ್ ಅಮ್ಮಣ್ಣಾಯ ಭಾಗವತಿಕೆಯನ್ನು ಒಂದೇ ವೇದಿಕೆಯಲ್ಲಿ ಕೇಳುವ ಅವಕಾಶ ಪ್ರೇಕ್ಷಕರಿಗೆ ದೊರೆತರೆ, ತೆಂಕುತಿಟ್ಟಿನ ಪ್ರತಿಭಾನ್ವಿತ ಕಲಾವಿದರ ಸಮ್ಮಿಲನವೇ ಅಲ್ಲಿತ್ತು. ರಾಮಾಂಜನೇಯ, ಮಾಯಾ ತಿಲೋತ್ತಮೆ, ಅಹಿ ಮಹಿರಾವಣ ಕಾಳಗದ ಅಬ್ಬರ, ಶೃಂಗಾರ, ಕರುಣ, ಹಾಸ್ಯ, ವೀರರಸಗಳ ಸನ್ನಿವೇಶಗಳು ಇಡೀ ಯಕ್ಷಗಾನ ಪ್ರದರ್ಶನ ಕಳೆಗಟ್ಟುವಂತೆ ಮಾಡಿತು. ಅಡೂರುದ್ವಯರ ಯುಗಳ ಚೆಂಡೆ ವಾದನ ಕಾರ್ಯಕ್ರಮದ ಕೊನೆಯವರೆಗೂ ಪ್ರೇಕ್ಷಕರನ್ನು ಕುಳಿತುಕೊಳ್ಳುವಂತೆ ಮಾಡಿತು. ಮಳೆಗಾಲದ ಮೊದಲ ಅಬ್ಬರದ ಈ ಯಕ್ಷಗಾನ ರಾಜೇಂದ್ರಕೃಷ್ಣ ಅವರ ಸಂಯೋಜನೆಯಲ್ಲಿ ಈ ಮೂಲಕ ಬಂಟ್ವಾಳದಲ್ಲಿ ದಾಖಲಾಗಿ, ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟಿತು.