ಜಿಲ್ಲೆಯಲ್ಲಿ ಯುವಕರ ರೈತ ಮಂತ್ರಿಮಂಡಳ ರಚಿಸಿ ಛಾಯಾ ಸರಕಾರ ಸ್ಥಾಪಿಸಬೇಕು, ಆಡಳಿತವನ್ನು ರೈತಪರವಾಗಿಸಲು ಹೆಜ್ಜೆಯಿಡಬೇಕು ಎಂದು ರೈತ ಮುಖಂಡ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದ್ದಾರೆ.
ಭಾನುವಾರ ಬಿ.ಸಿ.ರೋಡಿನಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘ,ಹಸಿರು ಸೇನೆ ದ.ಕ ಜಿಲ್ಲೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅದಕ್ಕಾಗಿ 18 ರಿಂದ 30 ವರ್ಷದ ಆಸಕ್ತ ಯುವಕರಿಂದ ಅರ್ಜಿಗೆ ಅಹ್ವಾನಿಸಲಾಗಿದೆ ಎಂದು ಹೇಳಿದರು. ಅರ್ಜಿ ಹಾಕುವವರು ದಯಾನಂದ ಶೆಟ್ಟಿ, ಕುಳವೂರುಗುತ್ತು ಹೌಸ್, ಕುಳವೂರು ಗ್ರಾಮ, ಕುಪ್ಪೆಪದವು ಪೋಸ್ಟ್ ಮಂಗಳೂರು ತಾಲೂಕು ಇಲ್ಲಿಗೆ ಸಲ್ಲಿಸಬಹುದು ಎಂದು ಶಾಸ್ತ್ರಿ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ರೈತ ಮುಖಂಡರಾದ ಧನಕೀರ್ತಿ ಬಲಿಪ,ಶ್ರೀಧರ ಶೆಟ್ಟಿ ಬೈಲುಗುತ್ತು,ಮನೋಹರ ಶೆಟ್ಟಿ ನಡಿಕಂಬಳಗುತ್ತು, ಮುರುವ ಮಹಾಬಲ ಭಟ್, ಸುಬ್ರಮಣ್ಯ ಭಟ್ ಸಜಿಪ, ಈಶ್ವರ ಭಟ್, ಎನ್.ಕೆ ಇದಿನಬ್ಬ,ಸುದೀಶ್ ಮಯ್ಯ, ರೊನಾಲ್ಡ್ ಡಿಸೋಜ, ಸುದೀಶ್ ಭಂಡಾರಿ ವಿಟ್ಲ, ದಯಾನಂದ ಶೆಟ್ಟಿ ಕುಳಾವೂರು ಗುತ್ತು ಹಾಗು ಇತರ ಮುಖಂಡರು ನಾನಾ ಸಲಹೆ ಸೂಚನೆಗಳನ್ನು ಒದಗಿಸಿದರು.
ರೈತರ ಸಾಲ ಮನ್ನ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಹಾಗೂ ಸಂಘಟನೆ ಬಗ್ಗೆ ಚರ್ಚಿಸಿ ರೈತರಿಂದ ಬಂದ ಸಲಹೆ ದಾಖಲೀಕರಣ ಮಾಡಲಾಯಿತು.ತುಂಬೆ ಡ್ಯಾಂ ಸಮಸ್ಯೆ, ಕುಮ್ಕಿ ಹಕ್ಕು ಬಗ್ಗೆ ಚರ್ಚಿಸಿ ಮುಂದಿನ ಸಭೆ ಬೆಳ್ತಂಗಡಿಯಲ್ಲಿ ನಡೆಸಲು ನಿರ್ಣಯಿಸಲಾಯಿತು.
ಮೂಲರಪಟ್ಣ ತಂಕಿಹಿತ್ಲು ಸುಂದರ ಶೆಟ್ಟಿ ಅವರ ಅಡಕೆ ಮತ್ತು ತೆಂಗು ಮರಗಳನ್ನು ಮಾರ್ಗ ರಚಿಸುವ ನೆಪದಲ್ಲಿ ನಾಶ ಮಾಡಲಾಗಿದ್ದು ಈ ಕುರಿತು ಸೂಕ್ತ ಪರಿಹಾರಕ್ಕಾಗಿ ಹೋರಾಟ ನಡೆಸಲು ಹಸಿರು ಸೇನೆ ಸಂಚಾಲಕ ದಯಾನಂದ ಶೆಟ್ಟಿ ಸೂಚನೆ ನೀಡಿದರು.