ಬಂಟ್ವಾಳ

ಸೆಪ್ಟೆಂಬರ್ 3ರಂದು ರಾಷ್ಟ್ರೀಯ ಧರ್ಮಸಂಸದ್: ಪೂರ್ವಭಾವಿ ಸಿದ್ಧತಾ ಸಭೆ

ಧರ್ಮಸ್ಥಳ ನಿತ್ಯಾನಂದನಗರದಲ್ಲಿರುವ ಶ್ರೀರಾಮ ಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸದ್ಗುರು ಪಟ್ಟಾಭಿಷೇಕ ದಶಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮಸಂಸದ್ – 2018 ಸೆಪ್ಟೆಂಬರ್ 3ರಂದು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಮೇಲ್ಕಾರ್ ನ ಬಿರ್ವ ಸೆಂಟರ್ ನಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸನಾತನ ಧರ್ಮ ಎತ್ತಿಹಿಡಿಯುವ ಕೆಲಸ ಇಂದು ಅಗತ್ಯ, ಧರ್ಮವು ಸಂಸ್ಕಾರ ವಂಚಿತವಾಗಿದ್ದು, ರಾಷ್ಟ್ರಮಟ್ಟದಲ್ಲಿ ಸನಾತನ ರಾಷ್ಟ್ರ ನಿರ್ಮಾಣದ ಕೈಂಕರ್ಯ ಮಾಡುವ ಅಗತ್ಯಗಳಿವೆ. ಈ ಉದ್ದೇಶಕ್ಕಾಗಿ ದೇಶದ ನಾಗರಿಕರು ಒಂದುಗೂಡಬೇಕು. ವಿದ್ಯಾರ್ಥಿಗಳ ಶಾಲಾ ಅಧ್ಯಯನದ ಪಠ್ಯಗಳಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ಅಧ್ಯಾಯವಾಗಿ ಅಳವಡಿಸುವುದು ಹಾಗೂ ವೇದ, ಉಪನಿಷತ್ತು, ಆರು ಶಾಸ್ತ್ರಗಳು ಸ್ಥಳೀಯ ಭಾಷೆಯಲ್ಲಿ ಅನುವಾದಿತವಾಗಿ ವಿದ್ಯಾರ್ಥಿ ಜೀವನದಲ್ಲಿ ದೊರಕುವಂತೆ ಮಾಡಬೇಕು. ರಾಷ್ಟ್ರೀಯ ಧರ್ಮಸಂಸದ್ ಉದ್ದೇಶವೇ ಇದು ಎಂದರು.

ಕನ್ಯಾನ ಶ್ರೀ ಕಾಶಿ ಕಾಳಭೈರವೇಶ್ವರ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಮಾತನಾಡಿ ಹಿಂದು ಧರ್ಮದ ಸಂತರು ಒಟ್ಟಾಗುವ ಮೂಲಕ ಹಿಂದುಗಳೆಲ್ಲರ ಐಕ್ಯತೆಯೂ ಮೂಡಬೇಕಾಗಿರುವುದು ಅಗತ್ಯ ಎಂದರು.

ಕಾರ್ಯಕ್ರಮದ ರೂಪುರೇಷೆಗಳ ಮಾಹಿತಿ ನೀಡಿದ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕನಕ, ಕಾಂಚಾಣ ಮತ್ತು ಕೀರ್ತಿಯ ಹಿಂದೆ ಹೋಗದೆ ಮಾನವೀಯ ಸದ್ಗುಣಗಳನ್ನು ಮೈಗೂಡಿಸುವುದು ಯೋಗಿಯ ಕರ್ತವ್ಯ. ಈ ನಿಟ್ಟಿನಲ್ಲಿ ಹಿಂದು ಸಮಾಜದ ಎಲ್ಲ ಸಂತರು ಒಟ್ಟುಗೂಡಬೇಕು, ಕಾಷಾಯ ವಸ್ತ್ರಧಾರಣೆ ಬಳಿಕ ಜಾತಿ ತಾರತಮ್ಯಗಳು ಇರದಂತೆ ಧರ್ಮದ ಉಳಿವಿಗೆ ಕೆಲಸ ಮಾಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸನಾತನ ಧರ್ಮ ಪ್ರಜಾಪ್ರಭುತ್ವ ಮಾದರಿಯನ್ನೇ ಹೇಳುತ್ತದೆ. ಧರ್ಮಸಂಸದ್ ಹಿನ್ನೆಲೆಯಲ್ಲಿ ಸ್ವಾಮೀಜಿ ಕೈಗೊಂಡಿರುವ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡುತ್ತೇನೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಇಂದು ಸಂಸ್ಕಾರದ ಕೊರತೆಯಿಂದ ಸಮಾಜದಲ್ಲಿ ತೊಂದರೆಗಳು ಆಗುತ್ತಿದ್ದು, ಮನುಷ್ಯನಲ್ಲಿರುವ ಸಂಕುಚಿತ ಮನೋಭಾವ ದೂರ ಮಾಡಬೇಕು. ಮಹಾತ್ಮರು ಹೇಳುವ ಮಾತುಗಳನ್ನು ನಾವೂ ಹೇಳುತ್ತೇವೆ ಆದರೆ ಎಷ್ಟು ಅನುಷ್ಠಾನ ಮಾಡುತ್ತೇವೆ ಎಂಬುದನ್ನು ಅರಿತುಕೊಳ್ಳಬೇಕು. ಹಿಂದು ಸಮಾಜದಲ್ಲಿರುವ ನ್ಯೂನತೆಗಳು, ನಮ್ಮವರು ಮಾಡುವ ತಪ್ಪುಗಳು ಹಾಗೂ ಕೆಲ ಸ್ವಾಮೀಜಿಯವರ ನಡವಳಿಕೆಗಳ ಕುರಿತು ಧರ್ಮಸಂಸದ್ ನಲ್ಲಿ ಚರ್ಚೆಯಾಗಬೇಕು ಎಂದು ವಿನಂತಿಸಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಹಿಂದು ವಿಚಾರಗಳು ಉಳಿಯಬೇಕು ಎಂದರೆ ಕೇಸರೀಕರಣ ಆಗುತ್ತದೆ. ಆದರೆ ವಿಶಾಲ ತಳಹದಿಯಲ್ಲಿ ಹಿಂದು ಧರ್ಮ ಉಳಿದಿದೆ ಎಂದರು.

ರಾಷ್ಟ್ರೀಯ ಧರ್ಮಸಂಸದ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಬಂಟ್ವಾಳ ಕ್ಷೇತ್ರ ಪದಾಧಿಕಾರಿಗಳ ಪಟ್ಟಿ ವಾಚಿಸಿ ಮಾತನಾಡಿ, ಧರ್ಮದ ಉಳಿವಿಗಾಗಿ ನಡೆಯುವ ಧರ್ಮಸಂಸದ್ ಇಂದು ನಡೆಯುತ್ತಿದೆ ಎಂದರು.

ನರಿಕೊಂಬುವಿನ ಕೇಶವ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಣಿಯೂರು ಶ್ರೀ ಮಹಾಬಲ ಸ್ವಾಮೀಜಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ರಾಷ್ಟ್ರೀಯ ಧರ್ಮಸಂಸದ್ ನ ಜಿಲ್ಲಾಧ್ಯಕ್ಷ ಚಿತ್ತರಂಜನ್ ಗರೋಡಿ, ಕ್ಷೇತ್ರದ ವಿಶ್ವಸ್ಥ ಮೋಹನ್ ಉಜ್ಜೋಡಿ, ಸಂತ ಪ್ರಚಾರಕ ಸಮಿತಿಯ ಪ್ರವೀಣ್ ವಾಲ್ಕೆ, ಪ್ರಮುಖರಾದ ಪೀತಾಂಬರ ಹೇರಾಜೆ, ಸರಪಾಡಿ ಅಶೋಕ ಶೆಟ್ಟಿ, ತಾರಾನಾಥ ಕೊಟ್ಟಾರಿ, ಕನ್ಯಾಡಿ ಸಮಿತಿಯ ತಾಲೂಕು ಅಧ್ಯಕ್ಷ ಸಂಜೀವ ಪೂಜಾರಿ, ಹಿಂದು ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ಧರ್ಮಸಂಸದ್ ನ ಕ್ಷೇತ್ರ ಸಮಿತಿ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಮಲಾಕ್ಷಿ ಪೂಜಾರಿ ಉಪಸ್ಥಿತರಿದ್ದರು. ಕನ್ಯಾಡಿ ಕ್ಷೇತ್ರದ ಪ್ರಧಾನ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಪ್ರಾಸ್ತಾವಿಕ ಮಾತನಾಡಿ, ಧರ್ಮಸಂಸದ್ ಕುರಿತ ಪಕ್ಷಿನೋಟ ನೀಡಿದರು. ಸಮಿತಿಯ ಪ್ರಮುಖರಾದ ರಾಮದಾಸ ಬಂಟ್ವಾಳ ಸ್ವಾಗತಿಸಿದರು.  ಬೇಬಿ ಕುಂದರ್ ವಂದಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts