ಬಂಟ್ವಾಳ

ಬಂಟ್ವಾಳ ತಾಲೂಕಿನ ಎಲ್ಲ ಹೈಸ್ಕೂಲುಗಳಲ್ಲಿ ಗ್ರಾಹಕ ಕ್ಲಬ್: ಬಿಇಒ

ಆಗಸ್ಟ್‌ ಅಂತ್ಯದೊಳಗೆ ಬಂಟ್ವಾಳದ ಎಲ್ಲ ಹೈಸ್ಕೂಲ್ ಗಳಲ್ಲಿ ಸಶಕ್ತ ಗ್ರಾಹಕರ ಕ್ಲಬ್ ಸ್ಥಾಪಿಸುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶಿವಪ್ರಕಾಶ್ ಹೇಳಿದರು.

ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಆಶ್ರಯದಲ್ಲಿ ವಿದ್ಯಾರ್ಥಿ ಗ್ರಾಹಕ ಕ್ಲಬ್ ಸಂಯೋಜಕ ಶಿಕ್ಷಕರಿಗೆ ನಡೆದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಕ್ಕಳನ್ನು ಶಾಲೆಗೆ ಸೇರಿಸುವ ಹೆತ್ತವರೂ ಗ್ರಾಹಕರು ಎಂದು ಹೇಳಿದ ಅವರು, ತಮಗೆ ಗೊತ್ತಿಲ್ಲದಂತೆ ಶೋಷಣೆಗೆ ಒಳಗಾದರೂ ಏನೂ ಮಾಡದ ಸ್ಥಿತಿಯಲ್ಲಿ ಇರುತ್ತಾರೆ ಎಂದರು. ಗ್ರಾಹಕರಾಗಿರುವ ನಮಗೆ ನಾನಾ ರೀತಿಯ ಶೋಷಣೆಗಳು ಆಗುತ್ತವೆ. ಶಿಕ್ಷಣದ ಮೂಲ ಉದ್ದೇಶವೇ ಪ್ರಶ್ನೆ ಮಾಡುವುದು. ಆದರೆ ಇದು ಸರಿಯಾಗಿ ನಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಒಂದು ವೇಳೆ ಪ್ರಶ್ನೆ ಮಾಡುವ ಮನೋವೃತ್ತಿ ಎಲ್ಲ ವಿದ್ಯಾರ್ಥಿಗಳಿಗಿದ್ದರೆ, ಪ್ರತ್ಯೇಕ ಟಿಂಕರಿಂಗ್ ಲ್ಯಾಬ್ ಗಳ ಅಗತ್ಯವೇ ಇರುತ್ತಿರಲಿಲ್ಲ ಎಂದ ಶಿವಪ್ರಕಾಶ್, ಪ್ರತಿ ಶಾಲೆಗಳಲ್ಲಿ ಗ್ರಾಹಕರ ಒಕ್ಕೂಟ ರಚನೆ ಅಗತ್ಯ. ಶಾಲಾ ಸಾಮೂಹಿಕ ಚಟುವಟಿಕೆ ಸಂದರ್ಭವೂ ಗ್ರಾಹಕ ಜಾಗೃತಿ ಮಾಹಿತಿಯನ್ನು ಒದಗಿಸಬಹುದು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸವಿತಾ ಸೌಹಾರ್ದ ಸಹಕಾರಿ ಅಧ್ಯಕ್ಷ ವಿಶ್ವನಾಥ ಬಂಟ್ವಾಳ್, ಮಕ್ಕಳಲ್ಲಿ ಗ್ರಾಹಕ ಜಾಗೃತಿಯನ್ನು ಮೂಡಿಸುವ ಜವಾಬ್ದಾರಿ ಶಿಕ್ಷಕರಿಗಿದ್ದು, ಮಾಹಿತಿ ಹಕ್ಕು ಕಾಯ್ದೆ ಕಾನೂನು ಜಾರಿಗೆ ಬಂದ ಮೇಲೆ ನಮಗೆ ನಿಜವಾದ ಸ್ವಾತಂತ್ರ್ಯ ದೊರಕಿತು. ಕಾನೂನು ಪ್ರಕಾರ ಪ್ರಶ್ನಿಸುವ ಹಕ್ಕು ನಮಗೆ ದೊರೆಯಿತು ಎಂದರು. ಸಾಹಿತ್ಯಿಕ ಸಂಘಟನೆಗೆ ರಾಜಕಾರಣಿಗಳು ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಜೆ.ಸಾಲಿಯಾನ್ ವಹಿಸಿ ಮಾತನಾಡಿ, ಸಾಮಾನ್ಯ ಪ್ರಜೆಗಳೂ ಗ್ರಾಹಕ ನ್ಯಾಯಾಲಯದಲ್ಲಿ ವಾದಿಸಲು ಸಾಧ್ಯ. ಇದಕ್ಕಾಗಿ ಗ್ರಾಹಕ ಜಾಗೃತಿ ಅಗತ್ಯ. ಗ್ರಾಹಕ ಹಿತರಕ್ಷಣೆಗೆ ಸಂಬಂಧಿಸಿ ಪ್ರತಿ ತಾಲೂಕುಗಳಲ್ಲೂ ಘಟಕ ಇರಬೇಕಾಗಿದ್ದು, ಜನರಿಗೂ ಇದರ ಅರಿವು ಮೂಡಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊಫೆಸರ್ ಡಾ. ಶೇಖರ್ ಎಸ್. ಅಯ್ಯರ್ ಸಂಯೋಜಕ ಶಿಕ್ಷಕರಿಗೆ ಗ್ರಾಹಕ ಹಿತರಕ್ಷಣೆಯ ಕುರಿತು ಹಾಗೂ ಜಾಗೃತಿಯ ಕುರಿತು ಮಾಹಿತಿ ನೀಡಿದರು. ಒಕ್ಕೂಟ ಕಾರ್ಯದರ್ಶಿ ವಿಷ್ಣು ನಾಯ್ಕ ಉಪಸ್ಥಿತರಿದ್ದ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ, ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ ನಿರೂಪಿಸಿದರು. ರಾಯಿ ರಾಜಕುಮಾರ ಸ್ವಾಗತಿಸಿದರು. ದ.ಕ.ಜಿಲ್ಲೆಯ ನಾನಾ ಕಾಲೇಜುಗಳಿಂದ ಸುಮಾರು 90ಕ್ಕೂ ಅಧಿಕ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ