www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಇದು ಕಾಕತಾಳೀಯವೋ, ಬೇರೇನಾದರು ಕಾರಣವಿದೆಯೋ ಎಂಬುದನ್ನು ತನಿಖೆ ನಡೆಸಬೇಕಾದವರು ಅಧಿಕಾರಿಗಳು, ಜನಪ್ರತಿನಿಧಿಗಳು. ಬಸ್ಸೊಂದು ಆಗ ತಾನೇ ಬಂದು ತೆರಳಿದ ನಂತರ ಯಾರಿಗೂ ಪ್ರಾಣಾಪಾಯವಾಗದೇ ಉಳಿದದ್ದಕ್ಕೆ ದೇವರಿಗೇ ಥ್ಯಾಂಕ್ಸ್ ಹೇಳಬೇಕಷ್ಟೇ. ಏಕೆಂದರೆ ಫಲ್ಗುಣಿ ನದಿಗೆ ಅಡ್ಡಲಾಗಿ ಹಾಕಿದ ಸೇತುವೆಯ ಎಂಟು ಅಂಕಣಗಳಲ್ಲಿ ಎರಡು ಕುಸಿದುಬಿದ್ದ ಸುದ್ದಿ ಸೋಮವಾರ ಸಂಜೆಯಿಂದ ಹರಿದಾಡತೊಡಗಿದಾಗ ಯಾರೂ ನಂಬಲಿಲ್ಲ. ಆದರೆ ಹೌದು. ಮೂಲರಪಟ್ನ ಸೇತುವೆ ಕುಸಿದಿದೆ. ರಸ್ತೆ ಸಾರಿಗೆಗೆ ಆಧಾರವಾಗಿ, ಊರುಗಳನ್ನು ಬೆಸೆಯುವ ಕೊಂಡಿ ಕಳಚಿಬಿದ್ದಿದೆ. ಲೋಕೋಪಯೋಗಿ ಇಲಾಖೆಯ ಮಂಗಳೂರು ಉಪವಿಭಾಗ ವ್ಯಾಪ್ತಿಗೆ ಸೇತುವೆ ಒಳಪಡುತ್ತದೆ. ಸೇತುವೆಯ ಒಂದು ಬದಿ ಬಂಟ್ವಾಳ ತಾಲ್ಲೂಕಿನ ಅರಳ ಗ್ರಾಮದಲ್ಲಿದ್ದರೆ, ಇನ್ನೊಂದು ಭಾಗ ಮಂಗಳೂರು ತಾಲ್ಲೂಕಿನ ಮುತ್ತೂರು ಭಾಗದಲ್ಲಿದೆ.
ಏನಾಯಿತು?
ಸೋಮವಾರ ಸಂಜೆ 6.15ಕ್ಕೆ ಬಂಟ್ವಾಳ ತಾಲೂಕಿನ ಸೊರ್ನಾಡು ಮತ್ತು ಮಂಗಳೂರು ತಾಲೂಕಿನ ಕುಪ್ಪೆಪದವು ಸಂಪರ್ಕಿಸುವ ಸೇತುವೆ ತುಂಬಿ ಹರಿಯುತ್ತಿರುವ ಫಲ್ಗುಣಿ ನದಿಗೆ ಕುಸಿದುಬಿತ್ತು. ಮಂಗಳೂರು ಭಾಗಕ್ಕೆ ಸೇರಿದ 2 ಮತ್ತು 3ನೇ ಅಂಕಣ ಕುಸಿದುಬಿದ್ದಿದೆ. ಈ ಹೊತ್ತಿನಲ್ಲಿ ಬಂಟ್ವಾಳದ ಭಾಗವೂ ಮುರಿದಿದೆ. ಘಟನೆ ನಡೆಯುವ ಕೆಲ ಕ್ಷಣಗಳ ಮೊದಲು ಅದ್ಯಪಾಡಿಗೆ ತೆರಳುವ ಬಸ್ ಸೇತುವೆ ದಾಟಿದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ಹಾಗೂ ಯಾವುದೇ ವಾಹನಗಳೂ ಆ ಸಂದರ್ಭ ಓಡಾಡುತ್ತಿರಲಿಲ್ಲ. ಸೊರ್ನಾಡಿನಿಂದ ಗುರುಪುರಕ್ಕೆ ಈ ಮಾರ್ಗ ಹತ್ತಿರವಾಗಿತ್ತು.
ಎಂಟು ಅಂಕಣಗಳು (ಕಂಬ) ಹೊಂದಿರುವ ಸೇತುವೆ ಕುಸಿದು ಬಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಎರಡೂ ಕಡೆಗಳ ಸಂಚಾರ ನಿರ್ಭಂಧಿಸಲಾಯಿತು. ಹೀಗಾಗಿ ಇನ್ನು ಕೆಲ ತಿಂಗಳುಗಳ ಕಾಲವಂತೂ ಅರಳ, ಮೂಲರಪಟ್ನ, ಬಡಗಬೆಳ್ಳೂರು, ಕೊತ್ತೂರು, ಮುತ್ತೂರು ಪ್ರದೇಶಗಳ ನೂರಾರು ಜನರು ನಿತ್ಯ ಕೆಲಸಗಳಿಗೆ ಬಂಟ್ವಾಳ, ಮಂಗಳೂರುಗಳಿಗೆ ತೆರಳಲು ಸುತ್ತು ಬಳಸುವ ದಾರಿಯನ್ನು ಹಿಡಿಯಲೇಬೇಕಾಗುತ್ತದೆ.
ಧಾರಾಕಾರ ಮಳೆಗೆ ಸೇತುವೆ ಕುಸಿದಿದೆ ಎನ್ನಲಾಗುತ್ತಿದ್ದರೂ ಅದರ ಅಂಕಣಗಳು ಶಿಥಿಲಗೊಂಡಿರುವುದು ಕುಸಿತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಸ್ಥಳೀಯ ಶಾಸಕರಾದ ರಾಜೇಶ್ ನಾಯ್ಕ್ ಮತ್ತು ವೈ.ಭರತ್ ಶೆಟ್ಟಿ ಬದಲಿ ವ್ಯವಸ್ಥೆಯಾಗುವವರೆಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಘಟನೆಯಿಂದ ಬಂಟ್ವಾಳ ತಾಲೂಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು ಕೊಳವೂರು ಸಂಪರ್ಕ ನೇರವಾಗಿ ಕಡಿದುಹೋಗಿದ್ದರೆ, ಸೋರ್ನಾಡಿನಿಂದ ಕುಪ್ಪೆಪದವಿಗೆ ಸಂಚರಿಸುವವರೆಲ್ಲ ದಿಕ್ಕು ಬದಲಾಯಿಸಬೇಕಾಗಿದೆ. ಬಂಟ್ವಾಳ ತಾಲೂಕಿನ ಸೊರ್ನಾಡಿನಿಂದ ಮಂಗಳೂರಿನ ಕುಪ್ಪೆಪದವು, ಕೈಕಂಬ, ಕಟೀಲು, ಇರುವೈಲು, ಎಡಪದವು, ಗಂಜೀಮಠ ಕಡೆಗಳಿಗೆ ಈ ಹಳ್ಳಿ ಮಾರ್ಗ ಸಹಕಾರಿಯಾಗಿತ್ತು.
ಸದ್ಯಕ್ಕೆ ಸೇತುವೆಯ ಮಂಗಳೂರು ಮತ್ತು ಬಂಟ್ವಾಳ ಕಡೆ ಎರಡೂ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಅಕ್ಕಪಕ್ಕದ ಅಂಕಣವೂ ಕುಸಿತದ ಭೀತಿಯಲ್ಲಿರುವ ಕಾರಣ ವಾಹನ ಸಂಚಾರ ಕಷ್ಟಸಾಧ್ಯ.
ಸ್ಥಳಕ್ಕೆ ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಅವರೂ ಸ್ಥಳಕ್ಕೆ ಭೇಟಿ ನೀಡಿದರು.