ದೇಶದ ಜನರ ಕಲ್ಯಾಣಕ್ಕಾಗಿ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಹೇಳುವ ಬಿಜೆಪಿಯು ಬಂಡವಾಳಶಾಹಿಗಳ ಪರವಾಗಿದ್ದು, ಜನಸಾಮಾನ್ಯರಿಗೆ ದೊಡ್ಡ ಹೊರೆ ನೀಡಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸೋಮವಾರ ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರೋಧಿಸಿ ಹಾಗೂ ಪೆಟ್ರೋಲ್, ಡಿಸೆಲ್, ಗ್ಯಾಸ್ ಮುಂತಾದವುಗಳ ಬೆಲೆ ಏರಿಕೆಯ ವಿರುದ್ಧ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈ ಹೇಳಿಕೆಯ ಮುಖ್ಯಾಂಶಗಳು ಇವು.
- ಎನ್‌ಡಿಎ ಸರಕಾರವು ನಿರಂತರವಾಗಿ ಜನರ ಮೂಲಭೂತ ವಸ್ತುಗಳ ಬೆಲೆ ಏರಿಕೆ ಮಾಡುವ ಈ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ.
- ಜನರಪರ ಕಾಳಜಿಯಿಂದ ಕಾಂಗ್ರೆಸ್ ಕೆಲಸ ಮಾಡಿದರೆ ಅದು ತಪ್ಪು, ಜನವಿರೋಧಿಯಾಗಿ ಕೆಲಸ ಮಾಡುವ ಬಿಜೆಪಿಯ ನಡೆ ಸರಿ ಎನ್ನುತ್ತಿದೆ.
- ಇದೀಗ ಬಿಜೆಪಿಯವರು ರೈತರ ಸಾಲಮನ್ನ ಮಾಡುವ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದಲ್ಲಿರುವ ಎನ್‌ಡಿಎ ಸರಕಾರವು 10 ಲಕ್ಷ ಸಾವಿರ ಕೋಟಿ ರೂ. ಬಂಡವಾಳ, ಬೃಹತ್ ಉದ್ದಿಮೆದಾರರ ಸಾಲ ಮನ್ನಾ ಮಾಡಿದೆಯೇ ಹೊರತು ದೇಶದ ಬೆನ್ನೆಲುಬಾಗಿರುವ ರೈತರ ನಯಾಪೈಸೆ ಸಾಲ ಮನ್ನಾ ಮಾಡಿಲ್ಲ
- ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಹೆಚ್ಚು ಮಾಡುವ ಮೂಲಕ ಜನರ ಕೀಸೆಗೆ ಕತ್ತರಿ ಹಾಕಿ, ಉದ್ದಿಮೆದಾರರಿಗೆ ಲಾಭ ಮಾಡುವ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿಪಂ ಸದಸ್ಯೆ ಮಂಜುಳಾ ಮಾವೆ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಸರಕಾರದ ನೀತಿಯನ್ನು ಟೀಕಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿಪಂ ಸದಸ್ಯ ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್, , ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಪಕ್ಷದ ಪ್ರಮುಖ ಮುಖರಾದ ಚಂದ್ರಶೇಖರ ಪೂಜಾರಿ, ಜನಾರ್ದನ ಚಂಡ್ತಿಮಾರ್, ಮದುಸೂಧನ ಶೆಣೈ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ವೆಂಕಪ್ಪ ಪೂಜಾರಿ ಬಂಟ್ವಾಳ, ಬಿ.ಕೆ.ಇದ್ದಿನಬ್ಬ,ಪರಮೇಶ್ವರ ಮೂಲ್ಯ, ಸಂಜೀವ ಪೂಜಾರಿ ಮೊದಲಾದವರಿದ್ದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್ ವಂದಿಸಿದರು.