ಸಾಧಕರು

ಹಳ್ಳಿಯಿಂದ ಇಂಗ್ಲೆಂಡ್ ಗೆ: ಚೆಸ್ ಪ್ರತಿಭೆಯ ‘ಯಶಸ್ವಿ’ ನಡೆ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ಸಣ್ಣ ಮಾತೇನಲ್ಲ.  ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಶಾಲೆಗೆ ಹೋಗುವ ಈ ಹುಡುಗಿ, ತಾಯಿಯೊಂದಿಗೆ ಸಂಜೆ ಪುತ್ತೂರು ಪೇಟೆಗೆ ಮಾಣಿ ಜಂಕ್ಷನ್ ಗೆ ಬಂದು ಹೋಗಬೇಕು. ಅಲ್ಲಿ ಕ್ಲಾಸ್ ಮುಗಿಸಿ ಮತ್ತೆ ಮನೆಗೆ ರಾತ್ರಿ ಮರಳುವಾಗ 8.30 ರಿಂದ 9 ಗಂಟೆ!.

ಹೀಗೆ ಛಲಬಿಡದೆ ಶ್ರವಣಶಕ್ತಿಯ ಕೊರತೆ ಇರುವ, ಮಾತನಾಡಲು ಕಷ್ಟಪಡುವ ಆದರೆ ಅದ್ಭುತ ಏಕಾಗ್ರತೆಯನ್ನು ಹೊಂದಿರುವ ತನ್ನ ಮಗಳನ್ನು ಚೆಸ್ ತರಬೇತಿಗೆಂದು ಪುತ್ತೂರಿಗೆ ಕರೆದುಕೊಂಡು ಹೋಗುತ್ತಿದ್ದ ಯಶೋಧಾ ಟೀಚರ್ ಗೆ ತನ್ನ ಶ್ರಮ ಸಾರ್ಥಕ ಎನಿಸಿದೆ. ಪುತ್ತೂರಿನ ಜೀನಿಯಸ್ ಚೆಸ್ ಅಕಾಡೆಮಿಯಲ್ಲಿ ಸತತ ಮೂರು ವರ್ಷಗಳ ಕಾಲ ತರಬೇತಿ ಪಡೆದು ಸಾಧನೆಯಲ್ಲಿ ಉತ್ತುಂಗಕ್ಕೇರಿದ ಕಡೇಶಿವಾಲಯದ ಶಾಲೆಯ 10ನೇ ತರಗತಿಯ ಯಶಸ್ವಿ ಜುಲೈ 6ರಿಂದ 16ರವರೆಗೆ ಶ್ರವಣಶಕ್ತಿಯ ಕೊರತೆ ಇರುವ ಮಹಿಳೆಯರಿಗಾಗಿ ಇರುವ ಅಂತಾರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಇಂಗ್ಲೆಂಡ್ ಗೆ ತೆರಳಲು ಅಣಿಯಾಗುತ್ತಿದ್ದಾಳೆ.

ಬುದ್ಧಿವಂತರ ಆಟವೆಂದೇ ಹೆಸರಾಗಿರುವ ಚದುರಂಗದಾಟ (ಚೆಸ್)ದಲ್ಲಿ ಫಿಡೆಯ 1300ನೇ ರೇಟಿಂಗ್ ಗಳಿಸಿರುವ ಯಶಸ್ವಿಯ ಯಶೋಗಾಥೆ ಇದು. ಯಶಸ್ಸಿನ ಪಥದಲ್ಲಿ ಇದು ಮೊದಲ ಹೆಜ್ಜೆ, ಇನ್ನೂ ಸಾಧಿಸುವುದು ಬಹಳಷ್ಟಿದೆ ಎಂಬುದು ಆಕೆಯ ಹೆತ್ತವರ ನುಡಿ.

ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್ ತಿಮ್ಮಪ್ಪ ಮೂಲ್ಯ ಮತ್ತು ಗಡಿಯಾರ ಸನಿಹದ ಶಾಲೆಯೊಂದರ ಶಿಕ್ಷಕಿ ಯಶೋಧಾ ದಂಪತಿಯ ಇಬ್ಬರು ಹೆಣ್ಣುಮಕ್ಕಳು ಯತಿಶ್ರೀ ಮತ್ತು ಯಶಸ್ವಿ. ಇವರಲ್ಲಿ ಯಶಸ್ವಿ ಈಗ ಕಡೇಶಿವಾಲಯ ಹೈಸ್ಕೂಲಿನ 10ನೇ ತರಗತಿ ವಿದ್ಯಾರ್ಥಿನಿ.

ಹುಟ್ಟಿದಂದಿನಿಂದಲೇ ಶ್ರವಣ ಸಾಮರ್ಥ್ಯ ಹೊಂದಿರದ ಈಕೆ ಮಾತನಾಡಲು ತಡವರಿಸುತ್ತಾಳೆ. ಆದರೆ ಕಲಿಕೆ, ಗ್ರಹಿಕಾ ಸಾಮರ್ಥ್ಯದಲ್ಲಿ ಭಾರಿ ಮುಂದು. ಸಣ್ಣವಳಿದ್ದಾಗಲೇ ಚೆಸ್ ಆಡುವುದರ ಕುರಿತು ಆಸಕ್ತಿ ಇರುವುದನ್ನು ಗಮನಿಸಿದ ಯಶೋಧಾ ಟೀಚರ್ ಮತ್ತು ತಿಮ್ಮಪ್ಪಮೂಲ್ಯ, ಈಕೆಗೆ ನುರಿತ ಶಿಕ್ಷಕರಿಂದ ತರಬೇತಿ ದೊರಕಬೇಕು ಎಂದು ಬಯಸುತ್ತಾರೆ. ಚೆಸ್ ಅನ್ನು ಶಾಸ್ತ್ರಬದ್ಧವಾಗಿ ಕಲಿಸುವವರು ಯಾರು ಎಂದು ಹುಡುಕುತ್ತಿದ್ದಾಗಲೇ ಸತ್ಯಪ್ರಸಾದ್ ಕೋಟೆ ಅವರು ಪುತ್ತೂರಿನಲ್ಲಿ ಆರಂಭಿಸಿರುವ ಜೀನಿಯಸ್ ಚೆಸ್ ಸ್ಕೂಲ್ ಗಮನಕ್ಕೆ ಬಂತು. ಯಶಸ್ವಿ ಆರನೇ ತರಗತಿಯಲ್ಲಿರುವಾಗ ಪುತ್ತೂರಿಗೆ ಬಂದು ಕೋಟೆಯವರಲ್ಲಿ ತನ್ನ ಮಗಳಿಗೆ ಚೆಸ್ ಕಲಿಸಿಕೊಡುವಿರಾ ಎಂದು ವಿನಂತಿಸುತ್ತಾರೆ. ಅಲ್ಲಿಂದ ತರಬೇತಿ ಆರಂಭ. ಅದಾದ ಬಳಿಕ ಯಶಸ್ವಿ ಪಯಣ ಆರಂಭ.

ಪ್ರತಿದಿನ ಶಾಲೆ ಬಿಟ್ಟ ಮೇಲೆ ಸಂಜೆ ಮಾಣಿ ಜಂಕ್ಷನ್ ಗೆ ಬಂದು ಪುತ್ತೂರಿಗೆ ಚೆಸ್ ಕಲಿಕೆಗೆ ಹೋಗುವುದು, ಬಳಿಕ ಮನೆಗೆ ಬರುವಾಗ ರಾತ್ರಿಯಾಗುತ್ತಿತ್ತು. ಆದರೆ ಇಂದು ಯಶಸ್ವಿ ಹಲವು ಪ್ರಶಸ್ತಿಗಳನ್ನು, ಮನ್ನಣೆಯನ್ನು ಪಡೆದಿದ್ದರೆ, ಅದಕ್ಕೆ ತರಬೇತಿಯೇ ಕಾರಣ ಎಂಬ ಸಂತೃಪ್ತಿ ಯಶೋಧಾ ಟೀಚರ್ ಗಿದೆ.

ಆರಂಭಿಕ ಪಾಠ, ತಂತ್ರಗಾರಿಕೆಯ ಬಾಲಪಾಠಗಳನ್ನು ಕೋಟೆಯವರ ಪತ್ನಿ ಯಶಸ್ವಿಗೆ ಹೇಳಿಕೊಡುತ್ತಾರೆ. ಕಿವಿ ಕೇಳಿಸದೆ, ಮಾತು ಬಾರದೇ ಇರುವ ಬಾಲಕಿಗೆ ಕಲಿಸಿದ್ದು ಗೊತ್ತಾಗುತ್ತದೆಯೋ ಎಂಬ ಅನುಮಾನ ನಮಗೂ ಇತ್ತು. ಆದರೆ ಆಕೆಯಲ್ಲಿನ ಗ್ರಹಿಕಾ ಸಾಮರ್ಥ್ಯ ಅದ್ಭುತವಾಗಿತ್ತು. ಒಂದೊಂದು ಹಂತದ ಕಲಿಕೆಯನ್ನು ಅಭ್ಯಸಿಸಿದ ಯಶಸ್ವಿ ಬೇಗ ಪಿಕಪ್ ಆದಳು. ಅಂತಾರಾಷ್ಟ್ರೀಯ ಮಟ್ಟದ ಫಿಡೆ ರೇಟಿಂಗ್ ನಲ್ಲಿ 1300ವರೆಗೆ ತಲುಪಿದ್ದಾಳೆ. ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಗಳಿಸಿದ ಯಶಸ್ವಿ, ಹಂತಹಂತವಾಗಿ ಮೂರು ವರ್ಷಗಳಲ್ಲಿ ಚೆಸ್ ನ ಪಟ್ಟುಗಳನ್ನು ಕಲಿತಳು. ವಿಶೇಷ ಸಾಮರ್ಥ್ಯದವರಿಗೆ ಇರುವವರಿಗಷ್ಟೇ ಅಲ್ಲ, ಜನರಲ್ ವಿಭಾಗದಲ್ಲೂ ಆಕೆ ಪ್ರಶಸ್ತಿಗಳನ್ನು ಗಳಿಸಿದಳು. ಇದು ಆಕೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಯಿತು. ಇದೀಗ ಇಂಗ್ಲೆಂಡ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಸತ್ಯಪ್ರಸಾದ್ ಕೋಟೆ ಹೇಳುತ್ತಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.