ಹಿರಿಯ ಯಕ್ಷಗಾನ ಕಲಾವಿದ, ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು 1968ನೇ ಇಸವಿಯಿಂದ ಹಿಮ್ಮೇಳ ತರಗತಿಯನ್ನು ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ತರಬೇತಿಯ ಸುವರ್ಣ ವರ್ಷಾಚರಣೆ ನೆನಪಿಗಾಗಿ ಮಾಂಬಾಡಿ ಶಿಷ್ಯ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರಾಗಿರುವ ಅವರ ಶಿಷ್ಯರು ಗುರುಗಳ ಸಮ್ಮುಖದಲ್ಲಿ ಸಮಾವೇಶ ನಡೆಸುತ್ತಿದ್ದು, ಸಿದ್ಧತಾ ಸಮಾಲೋಚನಾ ಸಭೆ ಜೂನ್ 3ರಂದು ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಈ ಸಂದರ್ಭ ಪದಾಧಿಕಾರಿಗಳ ಆಯ್ಕೆ, ಕಾರ್ಯಕ್ರಮದ ರೂಪರೇಶೆ ಇತ್ಯಾದಿ ಕುರಿತ ಸಮಾಲೋಚನೆ ನಡೆಯಲಿದ್ದು, ಮಾಂಬಾಡಿ ಶಿಷ್ಯರೆಲ್ಲ ಭಾಗವಹಿಸಲು ಆಯೋಜಕರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಮತ್ತು ಎಸ್.ಎನ್.ಭಟ್ ಬಾಯಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದವರಾಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟಿನ ಹಿಮ್ಮೇಳ ತರಗತಿಯನ್ನು ದ.ಕ, ಕಾಸರಗೋಡು ಜಿಲ್ಲೆಗಳಲ್ಲಿ ಕಳೆದ 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಸಾವಿರಾರು ಮಂದಿ ಅವರಿಂದ ಭಾಗವತಿಕೆ, ಚೆಂಡೆ, ಮದ್ದಳೆ ಕಲಿತಿದ್ದಾರೆ. ತೆಂಕುತಿಟ್ಟಿನ ಈಗಿನ ಪ್ರಸಿದ್ಧ ಭಾಗವತರು, ಹಿಮ್ಮೇಳ ವಾದಕರಲ್ಲಿ ಬಹುತೇಕ ಕಲಾವಿದರು ಮಾಂಬಾಡಿ ಶಿಷ್ಯರಾಗಿದ್ದಾರೆ. ಕದ್ರಿ, ಕಟೀಲು, ಧರ್ಮಸ್ಥಳ ಮೇಳಗಳಲ್ಲಿ ಹಿಮ್ಮೇಳವಾದಕರಾಗಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಸೇವೆ ಸಲ್ಲಿಸಿದವರು.