www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದ ಆವರಣದಲ್ಲಿ ಸಹಸ್ರ ಗೋವುಗಳ ಸಹಜ ಬದುಕಿಗೆ ಗೋಸ್ವರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದು ಜಗತ್ತಿಗೇ ಮಾದರಿಯಾಗಬೇಕು ಎಂಬ ಧ್ಯೇಯೋದ್ಧೇಶವನ್ನು ಇರಿಸಿಕೊಳ್ಳಲಾಗಿದೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ಏರ್ಪಡಿಸಿದ ಸಮಾರಂಭವೊಂದರಲ್ಲಿ ಗೋಸ್ವರ್ಗ ಯೋಜನೆಗೆ ಮಠದ ಭಕ್ತರ ೧೨ ಲಕ್ಷಕ್ಕೂ ಅಧಿಕ ಮೊತ್ತದ ಸಮರ್ಪಣೆಗಾಗಿ ಅಭಿನಂದಿಸಿ, ಆಶೀರ್ವಚನ ನೀಡಿದರು.
ಗೋವಿಗಾಗಿ ತಪಸ್ಸು ಅನಿವಾರ್ಯ. ಅದೇ ಶ್ರೇಯಸ್ಸು ಮತ್ತು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ ಎಂದು ಶ್ರೀಗಳು ಈ ಸಂದರ್ಭ ನುಡಿದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಶ್ರೀಗಳ ಕಾರ್ಯಯೋಜನೆಯನ್ನು ಶ್ಲಾಘಿಸಿದರು. ಶಾಸಕರಾದ ಸಂಜೀವ ಮಠಂದೂರು, ಅಂಗಾರ, ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟಿನ ಅಧ್ಯಕ್ಷ ಯು.ಗಂಗಾಧರ ಭಟ್, ಮಹಾಮಂಡಲ ಅಧ್ಯಕ್ಷೆ ಈಶ್ವರಿ ಶ್ಯಾಮ ಭಟ್ ಬೇರ್ಕಡವು, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು, ಡಾ.ಗಿರಿಧರ ಕಜೆ ಮತ್ತು ಸಹೋದರರು ಉಪಸ್ಥಿತರಿದ್ದರು. ಧಾರ್ಮಿಕ ಪರಿಷತ್ತಿನ ಸದಸ್ಯ ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಶಿವರಾಮ ಕಜೆ ಮತ್ತು ಶಾರದಾ ಕಜೆ ದಂಪತಿಯನ್ನು ಶ್ರೀಗಳು ಗೌರವಿಸಿದರು.