ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ನಮ್ಮ ಕ್ಷೇತ್ರದ ಶಾಸಕರು ವಿಫಲರಾಗಿದ್ದು, ಮುಂದಿನ ದಿನಗಳಲ್ಲಿ ಆಯ್ಕೆಯಾಗಲಿರುವ ಕ್ಷೇತ್ರದ ಶಾಸಕರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ನೂತನವಾಗಿ ಅಸ್ತಿತ್ವಕ್ಕೆ ಬಂದ ಬಂಟ್ವಾಳ ಅಲ್ಪಸಂಖ್ಯಾತ ವಿದ್ಯಾರ್ಥಿ ಸಮೂಹದ ಅಧ್ಯಕ್ಷ ಇಸ್ರಾರ್ ಗೂಡಿನಬಳಿ ಹೇಳಿದ್ದಾರೆ.
ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾದ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಲಲಿತಕಲಾ ಕ್ಷೇತ್ರಗಳಲ್ಲಿ ಪ್ರೋತ್ಸಾಹಿಸುವ ಕಾರ್ಯ ಮುಂದೆ ಆಯ್ಕೆ ಆಗಲಿರುವ ಶಾಸಕರಿಂದ ನಿರೀಕ್ಷಿಸುತ್ತಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗುತ್ತಿರುವ ಮತೀಯ ವಿಚಾರ, ಘಟನೆಗಳನ್ನುಜ ಈ ಸಮಾಜದಿಂದ ಸಂಪೂರ್ಣವಾಗಿ ಶಮನ ಮಾಡುವ ಹೊಣೆಕಾರಿಕೆಯನ್ನು ನಿಭಾಯಿಸುವಲ್ಲಿ ಆಡಳಿತ, ಸರಕಾರ ವಿಫಲವಾಗಿದೆ ಎಂದರು.
ಬಂಟ್ವಾಳ ಬಿ.ಸಿ.ರೋಡ್ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುವಲ್ಲಿ ವಿಫಲವಾಗಿದೆ. ಇದರಿಂದ ಬೀದಿ ನಾಯಿ ಕಾಟ ಜಾಸ್ತಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿದೆ. ಸ್ಥಳೀಯ ಶಾಸಕರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಲ್ಲ. ವಿದ್ಯಾಮಂದಿರಗಳನ್ನು ರಾಜಕೀಯ ಕೇಂದ್ರವನ್ನಾಗಿ ನಡೆಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಸಂಘಟನಾತ್ಮಕ ಸೃಜನಶೀಲತೆ ಕಳೆದುಕೊಳ್ಳಬೇಕಾದ ಅಪಾಯಕಾರಿ ಬೆಳವಣಿಗೆ ಇದೆ ಎಂದು ಅವರು ಹೇಳಿದರು.
ಗ್ರಾಮೀಣ ಮತ್ತು ನಗರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್ ಸೌಲಭ್ಯ, ಸರ್ಕಾರಿ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ತಾಂತ್ರಿಕ ಶಿಕ್ಷಣ ಸಂಸ್ಥೆ, ಒಳ ಮತ್ತು ಹೊರ ಕ್ರೀಡಾಂಗಣ, ಸಾರ್ವಜನಿಕ ರಂಗಮಂದಿರ ನಿರ್ಮಾಣಗೊಂಡಿಲ್ಲ. ಇಲ್ಲಿನ ಬಹುತೇಕ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನಿವಾರಣೆಗೊಂಡಿಲ್ಲ. ಇಲ್ಲಿನ ಪುರಸಭಾ ವ್ಯಾಪ್ತಿಯ ರಸ್ತೆ ಬದಿ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ಬೀದಿ ನಾಯಿ ಕಾಟ ಹೆಚ್ಚಳಗೊಂಡಿರುವ ಬಗ್ಗೆ ಈಗಾಗಲೇ ಹಲವಾರು ಬಾರಿ ಸ್ಥಳೀಯ ಶಾಸಕರಿಗೆ ದೂರಿಕೊಂಡರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಯುವಜನತೆಗೆ ಅನುಕೂಲವಾಗುವಂತೆ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಯಾವುದೇ ಕಂಪೆನಿ, ಕೈಗಾರಿಕೆ ಆರಂಭಗೊಂಡಿಲ್ಲ. ಇದಕ್ಕೆ ಬದಲಾಗಿ ಕೆಲವೊಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಇದಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಜನರ ಸಮಸ್ಯೆ ಆಲಿಸಲು ವಿಧಾನಸಭಾ ಅಭ್ಯರ್ಥಿಗಳು ಪರಸ್ಪರ ಸಂವಾದ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟಕರಾದ ಮಹಮ್ಮದ್ ರಿಕಾಝ್ ಬಿ.ಸಿ.ರೋಡ್, ಸುಹೈಲ್ ಖಾನ್ ಮಾರಿಪಳ್ಳ, ಝಿಯಾನ್ ಪಾಣೆಮಂಗಳೂರು, ಅಫ್ಜಲ್ ಜಬಲುನ್ನೂರು ಮೇಲ್ಕಾರ್ ಉಪಸ್ಥಿತರಿದ್ದರು.