ವಿಶೇಷ ವರದಿ

ವಿಧಾನಸಭೆಯಲ್ಲಿ ಬಂಟ್ವಾಳದವರು ಯಾರಿರ್ತಾರೆ?

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಏಪ್ರಿಲ್ 27ಕ್ಕೂ ಮೇ 12ಕ್ಕೂ ನಡುವೆ ಹದಿನೈದು ದಿನಗಳ ಅಂತರ. ಚುನಾವಣೆ ನಿಕಟವಾಗಿದೆ. ಬಂಟ್ವಾಳದಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಇನ್ನು ಮತಯಂತ್ರಗಳಲ್ಲಿ ಅವರ ಹೆಸರು ನಮೂದಿಸುವುದಷ್ಟೇ ಬಾಕಿ.

1978 ಹಾಗೂ ಬಳಿಕ ನಡೆದ ವಿಧಾನಸಭೆಗೆ ನಡೆದ 9 ಚುನಾವಣೆಗಳಲ್ಲಿ ಇಡೀ ಬಂಟ್ವಾಳ ತಾಲೂಕು ಕಾಂಗ್ರೆಸ್ ತೆಕ್ಕೆಗೆ ಮೂರು ಬಾರಿ ಸಿಕ್ಕಿದರೆ, ಬಿಜೆಪಿಗೆ ಎರಡು ಬಾರಿ ದೊರಕಿದೆ. ಉಳಿದ ನಾಲ್ಕು ಚುನಾವಣೆಗಳಲ್ಲಿ ಎರಡೂ ಪಕ್ಷಗಳಿಗೆ ಮತದಾರ ಸಮಾನ ಅವಕಾಶ ನೀಡಿದ್ದಾನೆ.

ಹೀಗಾಗಿ ಒಂದೇ ಪಕ್ಷಕ್ಕೆ ಬಂಟ್ವಾಳ ತಾಲೂಕು ಒಲಿದದ್ದು ಐದು ಬಾರಿ. (1983 – ಬಿಜೆಪಿ, 1985- ಕಾಂಗ್ರೆಸ್, 1999-ಕಾಂಗ್ರೆಸ್, 2004 – ಬಿಜೆಪಿ, 2013 – ಕಾಂಗ್ರೆಸ್) ಆಯ್ಕೆಯಾದ ಶಾಸಕರೂ, ರಚನೆಯಾದ ಸರಕಾರವೂ ಒಂದೇ ಪಕ್ಷಕ್ಕೆ ದೊರಕಿದ್ದು ಎರಡು ಬಾರಿ. (1999 -ಕಾಂಗ್ರೆಸ್, 2013 – ಕಾಂಗ್ರೆಸ್).

2008ರವರೆಗೆ ಬಂಟ್ವಾಳ ತಾಲೂಕಿನ ಕೇಂದ್ರಸ್ಥಾನ ಬಂಟ್ವಾಳ ಪೇಟೆಯ ಅರ್ಧ ಬಂಟ್ವಾಳ ಕ್ಷೇತ್ರದಲ್ಲಿದ್ದರೆ, ಇನ್ನರ್ಧ ವಿಟ್ಲ ಕ್ಷೇತ್ರಕ್ಕೆ ಸೇರಿತ್ತು. ಒಂದರಲ್ಲಿ ಕಾಂಗ್ರೆಸ್, ಮತ್ತೊಂದರಲ್ಲಿ ಬಿಜೆಪಿ. ಹೀಗೆ ಎಮ್ಮೆಲ್ಲೆಗಳೂ ಬೇರೆ ಬೇರೆ. ಇಂಥ ವಿಚಿತ್ರ ಸನ್ನಿವೇಶ ಈಗಲೂ ಮುಂದುವರಿದಿದೆ. ಬಂಟ್ವಾಳ ತಾಲೂಕಿನ ಬಹುಮುಖ್ಯ ಪಟ್ಟಣ ವಿಟ್ಲ ಪೇಟೆ ವಿಧಾನಸಭೆಯ ಪುತ್ತೂರು ಕ್ಷೇತ್ರಕ್ಕೆ ಒಳಪಟ್ಟರೆ, ಫರಂಗಿಪೇಟೆ ಮಂಗಳೂರು ಕ್ಷೇತ್ರಕ್ಕೆ ಸೇರುತ್ತದೆ.

1978ರಲ್ಲಿ ಬಂಟ್ವಾಳ ಕ್ಷೇತದಲ್ಲಿ ಕಾಂಗ್ರೆಸ್‌ನ ಬಿ.ಎ.ಮೊಯ್ದೀನ್ ಗೆದ್ದರೆ, ವಿಟ್ಲ ಕ್ಷೇತ್ರದ ಶಾಸಕರಾಗಿ ಬಿ.ವಿ.ಕಕ್ಕಿಲ್ಲಾಯರು (ಸಿಪಿಐ) ಆಯ್ಕೆಯಾದರು.

1983ರಲ್ಲಿ ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರಕ್ಕೆ ಒಂದೇ ಪಕ್ಷದ (ಬಿಜೆಪಿ) ಶಿವರಾವ್ ಮತ್ತು ರುಕ್ಮಯ ಪೂಜಾರಿ ಶಾಸಕರಾದರು. ಆಗ ಅಧಿಕಾರ ಜನತಾ ಪಕ್ಷಕ್ಕಿತ್ತು.

1985ರಲ್ಲಿ ರಾಮಕೃಷ್ಣ ಹೆಗಡೆ ಮತ್ತೆ ಮುಖ್ಯಮಂತ್ರಿಯಾದ ಸಂದರ್ಭ ಬಂಟ್ವಾಳ ತಾಲೂಕಿನಲಿ ಕಾಂಗ್ರೆಸ್ ಶಾಸಕರು. ಬಂಟ್ವಾಳದಿಂದ ಶಾಸಕರಾಗಿ ರಮಾನಾಥ ರೈ ಆಯ್ಕೆಯಾದರೆ, ವಿಟ್ಲಕ್ಕೆ ಉಮರಬ್ಬ ಶಾಸಕರಾದರು.

1989, 1994ರ ಚುನಾವಣೆಯಲ್ಲಿ ಬಂಟ್ವಾಳ ಮತ್ತು ವಿಟ್ಲದಿಂದ ರಮಾನಾಥ ರೈ (ಕಾಂಗ್ರೆಸ್), ರುಕ್ಮಯ ಪೂಜಾರಿ(ಬಿಜೆಪಿ) ಆಯ್ಕೆಯಾದರು. ರಾಜ್ಯದಲ್ಲಿ ಕಾಂಗ್ರೆಸ್, ಜನತಾ ಪಕ್ಷಗಳು ಅಧಿಕಾರ ವಹಿಸಿದ್ದವು. ಈ ಸಂದರ್ಭ 10 ವರ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಪ್ರಾಬಲ್ಯ ತಾಲೂಕಿನಲ್ಲಿ ಸಮಬಲದಲ್ಲಿತ್ತು.

ಆದರೆ ಇದನ್ನು ಮುರಿದದ್ದು 1999ರಲ್ಲಿ ವಿಟ್ಲ ಶಾಸಕರಾದ ಕೆ.ಎಂ.ಇಬ್ರಾಹಿಂ. ಅವರು ವಿಟ್ಲಕ್ಕೆ ಬಂಟ್ವಾಳ ಶಾಸಕರಾಗಿ ರೈ ಆಯ್ಕೆಯಾದಾಗ ಮತ್ತೆ ತಾಲೂಕು ಕೈವಶವಾಯಿತು. ಇದೇ ಸಂದರ್ಭ ಆಡಳಿತವೂ ಕಾಂಗ್ರೆಸ್ ಪಕ್ಷಕ್ಕೆ ದೊರಕಿತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು.

2004ರಲ್ಲಿ ಇಡೀ ತಾಲೂಕು ಬಿಜೆಪಿ ವಶವಾಯಿತು. (ನಾಗರಾಜ ಶೆಟ್ಟಿ, ಪದ್ಮನಾಭ ಕೊಟ್ಟಾರಿ). ಆಡಳಿತ ಕಾಂಗ್ರೆಸ್ – ಜೆಡಿಎಸ್, ಹಾಗೂ ಜೆಡಿಎಸ್ – ಬಿಜೆಪಿಗೆ ದೊರಕಿತು. ಕೆಲ ತಿಂಗಳು ನಾಗರಾಜ ಶೆಟ್ಟಿ ಮಂತ್ರಿಯೂ ಆದರು. ಅದೇ ಕೊನೆ. ವಿಟ್ಲ ಕ್ಷೇತ್ರವೆಂಬುದು ಇತಿಹಾಸಕ್ಕೆ ಸೇರಿಹೋಯಿತು. ಬಂಟ್ವಾಳ ಕ್ಷೇತ್ರದ ಬಹುಭಾಗ ಬಂಟ್ವಾಳ ಕ್ಷೇತ್ರಕ್ಕೆ ಬಂತು. ವಿಟ್ಲ ಪೇಟೆ ಸಹಿತ ಕೆಲ ಭಾಗಗಳು ಪುತ್ತೂರು ಕ್ಷೇತ್ರಕ್ಕೆ ಬಂದವು. ಕೆಲವು ಮಂಗಳೂರು ಕ್ಷೇತ್ರಕ್ಕೆ ಸೇರಿಹೋಯಿತು.

2008ರ ಚುನಾವಣೆಯಲ್ಲಿ ಬಂಟ್ವಾಳ ರಮಾನಾಥ ರೈ (ಕಾಂಗ್ರೆಸ್), ಪುತ್ತೂರು – ಮಲ್ಲಿಕಾ ಪ್ರಸಾದ್ (ಬಿಜೆಪಿ), ಮಂಗಳೂರು – ಯು.ಟಿ. ಖಾದರ್ (ಕಾಂಗ್ರೆಸ್) ಗೆದ್ದರು. ಈ ಬಾರಿಯೂ ಎರಡೂ ಪಕ್ಷಗಳಿಗೆ ಮತದಾರರು ಅವಕಾಶ ನೀಡಿದರು.

2013ರಲ್ಲಿ ಮತ್ತೆ ಇಡೀ ತಾಲೂಕು ಕಾಂಗ್ರೆಸ್ ವಶವಾಯಿತು. ರೈ, ಖಾದರ್, ಶಕುಂತಳಾ ಶೆಟ್ಟಿ ಗೆದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೂ ಬಂತು.

ನಾಮ ಪತ್ರ ಸಲ್ಲಿಸಿದವರು 8 ಮಂದಿ, 13 ನಾಮಪತ್ರ:

  1. ಬಿ.ರಮಾನಾಥ ರೈ (ಕಾಂಗ್ರೆಸ್) ಒಂದು ಪ್ರತಿ ನಾಮಪತ್ರ
  2. ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು (ಬಿಜೆಪಿ) ಎರಡು ಪ್ರತಿ ನಾಮಪತ್ರ
  3. ಬಾಲಕೃಷ್ಣ ಪೂಜಾರಿ (ಲೋಕಸೇವಾದಳ) ಮತ್ತೊಂದು ಜೆಡಿಯುನಿಂದ (ಒಟ್ಟು 2 ನಾಮಪತ್ರ)
  4. ಶಮೀರ್ (ಎಂಇಪಿ) ಒಂದು ಪ್ರತಿ ನಾಮಪತ್ರ
  5. ಇಬ್ರಾಹಿಂ ಕೈಲಾರ್ (ಪಕ್ಷೇತರ). ಮತ್ತೊಂದು ಪ್ರತಿ ಜೆಡಿಎಸ್ ನಿಂದ (ಒಟ್ಟು 2 ನಾಮಪತ್ರ)
  6. ತುಂಗಪ್ಪ ಬಂಗೇರ (ಬಿಜೆಪಿ) 1 ನಾಮಪತ್ರ
  7. ಅಬ್ದುಲ್ ಮಜೀದ್ (ಎಸ್.ಡಿ.ಪಿ.ಐ.) (2 ನಾಮಪತ್ರ)
  8. ರಿಯಾಜ್ ಫರಂಗಿಪೇಟೆ (ಎಸ್.ಡಿ.ಪಿ.ಐ.) (2 ನಾಮಪತ್ರ)

ನಾಮಪತ್ರ ತಿರಸ್ಕೃತ

  1. ತುಂಗಪ್ಪ ಬಂಗೇರ (ಬಿಜೆಪಿ)
  2. ಇಬ್ರಾಹಿಂ ಕೈಲಾರ್ (ಜೆಡಿಎಸ್ ನಿಂದ ಸಲ್ಲಿಸಿದ ನಾಮಪತ್ರ)

ನಾಮಪತ್ರ ಹಿಂತೆಗೆತ:

  1. ಅಬ್ದುಲ್ ಮಜೀದ್ (ಎಸ್.ಡಿ.ಪಿ.ಐ)
  2. ರಿಯಾಜ್ ಫರಂಗಿಪೇಟೆ (ಎಸ್.ಡಿ.ಪಿ.ಐ.)

ಕಣದಲ್ಲಿ ಇರುವವರು:

  1. ಬಿ.ರಮಾನಾಥ ರೈ (ಕಾಂಗ್ರೆಸ್)
  2. ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು (ಬಿಜೆಪಿ)
  3. ಬಾಲಕೃಷ್ಣ ಪೂಜಾರಿ (ಲೋಕಸೇವಾದಳ)
  4. ಶಮೀರ್ (ಎಂಇಪಿ)
  5. ಇಬ್ರಾಹಿಂ ಕೈಲಾರ್ (ಪಕ್ಷೇತರ).

ಇವರಲ್ಲಿ ಯಾರು ವಿಧಾನಸಭೆಯಲ್ಲಿ ಇರ್ತಾರೆ? ಮೇ.15ವರೆಗೆ ಕಾದು ನೋಡಬೇಕು. ತೀರ್ಮಾನ ಮತದಾರರದ್ದು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts