ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಬಿಸುಪರ್ಬ 2018 ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ತುಳುನಾಡಿನ ಪ್ರತೀ ಕಾರ್ಯಕ್ರಮಗಳನ್ನು ಆಚರಣೆ ಮಾಡಿದರೆ ತುಳು ಭಾಷೆಯ ಬೆಳವಣಿಗೆಗೆ ಶಕ್ತಿ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ತುಳುನಾಡಿನ ಅಚರಣೆಗಳನ್ನು ಸಾರ್ವಜನಿಕವಾಗಿ ಆಚರಿಸುವ ಚಿಂತನೆ ತುಳುಸಾಹಿತ್ಯ ಅಕಾಡೆಮಿಗೆ ಇದೆ ಎಂದರು.
ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಉಪನ್ಯಾಸ ನೀಡಿ ತುಳುನಾಡಿನಲ್ಲಿ ಹಬ್ಬವೆಂದರೆ ದೀಪಾವಳಿ ಮಾತ್ರ. ಉಳಿದೆಲ್ಲವೂ ಬೇರೆ ಬೇರೆ ಸಂದರ್ಭಗಳಲ್ಲಿನ ಆಚರಣೆಗಳು. ಆದರೆ ವರ್ತಮಾನದ ಕಾಲಘಟ್ಟದಲ್ಲಿ ಎಲ್ಲಾ ಆಚರಣೆಗಳನ್ನು ಹಬ್ಬಗಳಾಗಿ ಕಾಣಲಾಗುತ್ತಿದೆ ಎಂದರು. ತುಳುನಾಡಿನ ಆಚರಣೆಗಳಿಗೆ ಜೀವಂತಿಕೆ ಇರುವುದು ಕೃಷಿಯಲ್ಲಿ. ಕೃಷಿ ಅವನತಿಯಾದಂತೆ ಕೃಷಿ ಮಿಳಿತ ಆಚರಣೆಗಳು ನಾಶವಾಗುತ್ತಿದೆ ಎಂದ ಅವರು ಸಂಸ್ಕೃತಿ ಎನ್ನುವುದು ನಿಂತ ನೀರಲ್ಲ. ಹಳೇ ವಿಚಾರಗಳು ಹೋದಂತೆ ಹೊಸ ವಿಚಾರಗಳು ಅಲ್ಲಿ ಸೇರಿಕೊಳ್ಳುತ್ತವೆ ಎಂದು ತಿಳಿಸಿದರು.
ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ರಮಾ ಎಸ್. ಭಂಡಾರಿ, ಉದ್ಯಮಿ ವಿಶ್ವನಾಥ ಸಾಲ್ಯಾನ್, ತುಳು ಒಕ್ಕೂಟದ ಶಶಿಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಳುಕೂಟದ ಸದಸ್ಯ ಸೇಸಪ್ಪ ಮಾಸ್ತರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಡಿ.ಎಂ.ಕುಲಾಲ್ ಪ್ರಸ್ತಾವಿಸಿದರು, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.