ಬಂಟ್ವಾಳ

ಬಂಟ್ವಾಳ ಪುರಸಭೆಯಲ್ಲಿ ರಾಜಕೀಯ ವಾಕ್ಸಮರ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ನೀವು ಅವರ  ಬಗ್ಗೆ ಯಾಕೆ ಮಾತನಾಡುತ್ತೀರಿ, ಇದು ಪುರಸಭೆ ಮೀಟಿಂಗ್, ಇಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಿ.

ಜೈಲಿಗೆ ಹೋಗಿಲ್ವೇ ನಿಮ್ಮ ನಾಯಕರು?

ನಿಮ್ಮ ನಾಯಕರೇನು ಕಮ್ಮಿಯೇ ಅವರೂ ಜೈಲಿಗೆ ಹೋಗಿಲ್ವ?

ಇದು ಕ್ಯಾಂಟೀನ್ ಬದಿಯೋ, ರಸ್ತೆ ಬದಿಯೋ, ಅಂಗಡಿಗಳ ಪಕ್ಕವೋ ಅಥವಾ ಮದ್ವೆ ಸಮಾರಂಭದಲ್ಲೋ ನಡೆದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಟ್ಟಾ ಅಭಿಮಾನಿಗಳ ವಾಕ್ಸಮರವೇನಲ್ಲ. ಸಾಕ್ಷಾತ್ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದ ಪರಿ.

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಈ ಸಂದರ್ಭ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಎ.ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಭಾಸ್ಕರ ಟೈಲರ್, ಸುಗುಣ ಕಿಣಿ, ಮಹಮ್ಮದ್ ಶರೀಫ್, ಚಂಚಲಾಕ್ಷಿ, ಜೆಸಿಂತಾ ಡಿಸೋಜ, ವಸಂತಿ ಚಂದಪ್ಪ, ಜಗದೀಶ ಕುಂದರ್, ಗಂಗಾಧರ, ಬಿ.ಪ್ರವೀಣ್, ಬಿ.ಮೋಹನ್, ಮೊಹಮ್ಮದ್ ಇಕ್ಬಾಲ್ ಗೂಡಿನಬಳಿ, ಮೊನೀಶ್ ಆಲಿ, ನಾಮನಿರ್ದೇಶಿತ ಸದಸ್ಯರಾದ ಪ್ರವೀಣ್ ಕಿಣಿ, ಸಿದ್ದಿಕ್ ಗುಡ್ಡೆಯಂಗಡಿ ಮೊದಲಾದವರು ಇದ್ದ ಸಭೆಯಲ್ಲಿ ಹಿಂದಿನ ಸಾಲಿನ ಸಭೆಯ ವಿವರಗಳನ್ನು ಸಿಬ್ಬಂದಿ ರಜಾಕ್ ಮಂಡಿಸಿದರು. ಈ ಸಂದರ್ಭ ವಾಸು ಪೂಜಾರಿ ಅವರು ಬಡವರಿಗೋಸ್ಕರ ಬಂಟ್ವಾಳ ಪುರಸಭೆಯ ಅನಧಿಕೃತ ಕಟ್ಟಡದ ನಂಬ್ರ ಅಧಿಕೃತಗೊಳಿಸುವ ವಿಚಾರದಲ್ಲಿ ಸ್ತಳ ವಿಸ್ತೀರ್ಣದ ನಿಯಮ ಸಡಿಲಿಸಬೇಕು ಎಂದು ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರಸ್ತಾಪಗೊಂಡದ್ದನ್ನು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ಕಾನೂನಿನ ನಿಯಮದಡಿ ಅವಕಾಶವಿಲ್ಲ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು.

ಪುರಸಭೆಯ ಬಜೆಟ್, ಲೆಕ್ಕಪತ್ರ, ಬಿಲ್ ಪಾವತಿಯ ಕುರಿತು ತಮಗಿದ್ದ ಆಕ್ಷೇಪಗಳನ್ನು ಈ ಬಾರಿಯೂ ಬಿಜೆಪಿ ಸದಸ್ಯರು ಮಂಡಿಸಿದರು. ವಿ.ಪಿ.ರಸ್ತೆಯ ಕಾಮಗಾರಿಯಲ್ಲಿ 10 ಲಕ್ಷ ರೂ ಕಾಮಗಾರಿಗೆ ತಗಲಿದ್ದರೆ, 18 ಲಕ್ಷ ರೂ ಪೇಮೆಂಟ್ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ ಸದಸ್ಯರಾದ ಗೋವಿಂದ ಪ್ರಭು ಮತ್ತು ದೇವದಾಸ ಶೆಟ್ಟಿ, ಒಂದೇ ರಸ್ತೆಗೆ ಮೂರು ಬಾರಿ ಪೇಮೆಂಟ್ ಆಗಿದೆ, ಪುರಸಭೆಯಲ್ಲಿ ಲೆಕ್ಕವ್ಯತ್ಯಾಸಗಳು ಅನೇಕ ನಡೆಯುತ್ತಿವೆ ಎಂದು ಆರೋಪಿಸಿದರು. ಜಮಾಖರ್ಚು ಕೊಟ್ಟದ್ದು, ಸಹಿ ಹಾಕಿ ಕೊಟ್ಟದ್ದು, ಮೀಟಿಂಗ್ ತಿದ್ದುಪಡಿ ಕೊಟ್ಟದ್ದರಲ್ಲಿ ಬೇರೆ ಬೇರೆ ಲೆಕ್ಕ ಇದೆ. ಯಾವುದು ಸರಿ ಎಂದು ದೇವದಾಸ ಶೆಟ್ಟಿ ಪ್ರಶ್ನಿಸಿದರು.

ಖಾಸಗಿಯವರಿಗೆ ಯಾಕೆ ನೀರಿನ ಬಿಲ್ ಲೆಕ್ಕ:

ನೀರಿನ ಬಿಲ್ ವಿಚಾರದಲ್ಲಿ ಪುರಸಭೆಯವರು ಖಾಸಗಿಯವರಿಗೆ ಹಣ ಪಾವತಿ ಮಾಡುವುದು ಯಾಕೆ ಎಂದು ಪ್ರಶ್ನಿಸಿದ ಸದಸ್ಯ ಬಿ.ಪ್ರವೀಣ್, ಕುಡಿಯುವ ನೀರಿನ ಮಾಸಿಕ ಬಿಲ್ಲನ್ನು ಗಣಕೀಕರಣಗೊಳಿಸಿ, ಗ್ರಾಹಕರಿಗೆ ಗಣಕೀಕರಣ ಮೂಲಕ ಬಿಲ್ ವಿತರಿಸುವ ಸಂದರ್ಭ ಟೆಂಡರ್ ಹಣ 15,25,000 ರೂ ಪಾವತಿಸುವ ಕುರಿತು ಸ್ಪಷ್ಟನೆ ಬಯಸಿದರು. ನೀರಿನ ಬಿಲ್ ಕಲೆಕ್ಟ್ ಮಾಡುವವರಿಗೆ ಎಷ್ಟು ಹೋಗುತ್ತದೆ ಪ್ರಶ್ನಿಸಿದರು. ಇದಕ್ಕೆ ಮತ್ತೊಮ್ಮೆ ಸಭೆ ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

ಪುರಸಭೆಯಲ್ಲಿ ಆಧಾರ್ ಕೇಂದ್ರವನ್ನು ಸ್ಥಾಪಿಸುವಂತೆ ಮೊನೀಶ್ ಆಲಿ ಒತ್ತಾಯಿಸಿ, ಮಿನಿ ವಿಧಾನಸೌಧದಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಪ್ರಸ್ತಾಪಿಸಿದರು.

ಯಡಿಯೂರಪ್ಪ, ಇಂದಿರಾಗಾಂಧಿ ಪ್ರವೇಶ:

ನೂತನವಾಗಿ ನಿರ್ಮಾಣವಾದ ಬುಡಾ ಕಚೇರಿ ಪಕ್ಕದ ಕೊಠಡಿಯನ್ನು ಬಾಡಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದ ಚರ್ಚೆಯ ವೇಳೆ ಬಾಡಿಗೆ‌ ನಿಗದಿ ಪಡಿಸುವ ಕುರಿತು ಅಧ್ಯಕ್ಷ‌ ರಾಮಕೃಷ್ಣ ಆಳ್ವ ಅವರು ಸಭೆಗೆ ಮಾಹಿತಿ ನೀಡಿದಾಗ ವಿಪಕ್ಷ ಸದಸ್ಯ ದೇವದಾಸ ಶೆಟ್ಟಿ ಅವರು,ಬಾಡಿಗೆ ಕೊಟ್ಟ ಮೇಲೆ ದರ ನಿಗದಿ ಪಡಿಸುವಿರಾ ಅಥವಾ ದರ ನಿಗದಿಯಾದ ಬಳಿಕ ಟೆಂಡರ್ ಕರೆದು ಬಾಡಿಗೆಗೆ ನೀಡುತ್ತಿರಾ? ಎಂದು ಪ್ರಶ್ನಿಸಿದರು. ಆಗ ಬುಡಾ ಅಧ್ಯಕ್ಷರು ಆದ ಸದಸ್ಯ ಸದಾಶಿವ ಬಂಗೇರ ಅವರು, ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ,ನಿಮ್ಮ ಕಾಲದಲ್ಲಿ ಹಾಗೆ ಅಗಿರಬಹುದು,ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಎಂದು ಹೇಳಿದ್ದು,ಸದಸ್ಯ ದೇವದಾಸ ಶೆಟ್ಟಿ ಅವರನ್ನು ಕೆರಳಿಸಿತು.  ಇದನ್ನು ಬಲವಾಗಿ ಆಕ್ಷೇಪಿಸಿದ ದೇವದಾಸ ಶೆಟ್ಟಿ, ಯಡಿಯೂರಪ್ಪ ಅವರನ್ನು ಜೈಲಿಗೆ ಹೋದವರು ಎಂದು ಟೀಕಿಸುವುದಾಗಲೀ, ಅವರ ಕುರಿತು ಪುರಸಭೆಯಲ್ಲಿ ಪ್ರಸ್ತಾಪಿಸುವುದಾಗಲೀ ಸರಿ ಅಲ್ಲ, ಎಂದರು. ಆದರೆ ಮತ್ತೆ ಸದಾಶಿವ ಬಂಗೇರ ಮತ್ತು ದೇವದಾಸ ಶೆಟ್ಟಿ ಮಧ್ಯೆ ಮಾತಿನ ಚಕಮಕಿ ಮುಂದುವರಿಯಿತು. ಈ ಸಂದರ್ಭ ಇಂದಿರಾಗಾಂಧಿಯವರೂ ಜೈಲಿಗೆ ಹೋದವರಲ್ವೇ ಎಂದು ಶೆಟ್ಟಿ ಪ್ರಶ್ನಿಸಿದರು. ಚರ್ಚೆ ದಾರಿ ತಪ್ಪುತ್ತಿದ್ದಂತೆ ಸದಸ್ಯರಾದ ಗಂಗಾಧರ, ಪ್ರವೀಣ .ಬಿ,ಮತ್ತಿತರರು ಸಮಾಧಾನ ಪಡಿಸಲು ಯತ್ನಿಸಿದರೆ ,ದೇವದಾಸ ಶೆಟ್ಟಿ ಮಾತ್ರ ವಾಗ್ದಾಳಿ ಮುಂದುವರಿಸುತ್ತಲೇಇದ್ದರು .ಅತ್ತ ಸಿಬ್ಬಂದಿ ರಜಾಕ್,ಸಭಾ ಅಜೆಂಡಾ ಓದುತ್ತಲೇ ಇದ್ದು,ಅಲ್ಲಿಗೆ ಸಭೆ ತಣ್ಣಗಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts