www.bantwalnews.com – ಸಂಪಾದಕ: ಹರೀಶ ಮಾಂಬಾಡಿ
www.bantwalnews.com REPORT
ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಇರುವ ಕೊಳವೆಬಾವಿಗಳು ಉಪಯೋಗಕ್ಕಿಲ್ಲದಂತಾಗಿದೆ. ಕೊಳವೆ ಬಾವಿಗಳ ಅಗತ್ಯವಿದ್ದು, ಸಮಸ್ಯೆ ನೀಗಿಸಬೇಕಾದರೆ ಕೊಳವೆ ಬಾವಿ ತೋಡುವ ಅಗತ್ಯವಿದೆ ಎಂದು ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಗಮನ ಸೆಳೆದಿದ್ದಾರೆ.
ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಕುಡಿಯುವ ನೀರಿಗೆ ಸಂಬಂಧಿಸಿ ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆಯಲ್ಲಿ ಗಮನ ಸೆಳೆದ ಪಿಡಿಒಗಳು, ಹಲವೆಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಕೆಯಾಗುತ್ತಿಲ್ಲ, ಇದಕ್ಕೆ ಕೆಲವೆಡೆ ನೀರಿನ ಕೊರತೆ ಇದ್ದರೆ ಕೆಲವೆಡೆ ವಿದ್ಯುತ್ ಸಮಸ್ಯೆ ಇರುವುದಾಗಿ ಮಾಹಿತಿ ಒದಗಿಸಿದರು.
ಜನರಿಗೆ ಸಮಸ್ಯೆಗಳ ಅರಿವು ಬಾರದಂತೆ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಟಾಸ್ಕ್ ಫೋರ್ಸ್ ಅನುಮತಿಯಿಂದ ಬೋರ್ ವೆಲ್ ತೆರೆಯಬಹುದು. ಯಾವ್ಯಾವ ಪಂಚಾಯತ್ ನಲ್ಲಿ ನೈಜ ಸಮಸ್ಯೆ ಇದೆ ಅವುಗಳನ್ನು ತಿಳಿಸಬೇಕು. ಕುಡಿಯುವ ನೀರು ಒದಗಿಸುವುದು ನಮ್ಮ ಆದ್ಯತೆ ಎಂದು ಸಚಿವ ರಮಾನಾಥ ರೈ ಹೇಳಿದರು.
ಈ ಸಂದರ್ಭ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ನರಿಂಗಾಣ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಕೊರತೆ ಕಾಣಿಸುತ್ತಿದೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಾರ್ವಜನಿಕರಿಗೆ ನೀರಿಲ್ಲ ಎಂಬ ಭಾವನೆ ಬರಬಾರದು. ಅನಿವಾರ್ಯ ಪರಿಸ್ಥಿತಿಯಲ್ಲಿ ಟ್ಯಾಂಕರ್ ಮೂಲಕವಾದರೂ ನೀರು ಒದಗಿಸುವ ಕುರಿತು ಗ್ರಾಮಮಟ್ಟದಲ್ಲೇ ವ್ಯವಸ್ಥೆ ಮಾಡಿಸಿಕೊಳ್ಳಬೇಕು. ಇವನ್ನು ಪಿಡಿಒಗಳು ಮೇಲ್ವಿಚಾರಣೆ ಮಾಡಬೇಕು. ಪ್ರತಿದಿನದ ಮಾಹಿತಿಯನ್ನು ತನಗೆ ನೀಡಬೇಕು. ಈ ಕುರಿತು ಟಾಸ್ಕ್ ಫೋರ್ಸ್ ರಚನೆಯಾಗಿದ್ದು, ತಹಸೀಲ್ದಾರ್, ಎಇಇ ಮತ್ತು ಇಒ ಮೇಲ್ವಿಚಾರಣೆಯಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಎಲ್ಲ ಪಿಡಿಒಗಳು ನೀರಿನ ಕುರಿತು ಯಾವುದೇ ದೂರು ಬಂದರೂ ಅದಕ್ಕೆ ಸ್ಪಂದಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಪಂಪ್ ಕಡ್ಡಾಯ:
ಪ್ರತಿಯೊಂದು ಗ್ರಾಪಂಗಳಲ್ಲೂ ಹೆಚ್ಚುವರಿ ಪಂಪ್ ಸೆಟ್ ಗಳು ಕಡ್ಡಾಯವಾಗಿ ಇರಬೇಕು ಎಂದು ಸೂಚನೆ ನೀಡಿದ ತಾಪಂ ಇಒ, 14ನೇ ಹಣಕಾಸು ಯೋಜನೆಯಡಿ ಇದಕ್ಕೆ ತತ್ ಕ್ಷಣ ಹಣಕಾಸಿನ ನೆರವು ಮಂಜೂರಾಗುತ್ತದೆ ಎಂದರು.
ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್ ನ ಪಿಡಿಒಗಳು ತಮ್ಮ ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಸೆಳೆದು ನೀರು ಪೂರೈಕೆಗೆ ಕೊಳವೆ ಬಾವಿಯ ಅಗತ್ಯವಿದೆ ಎಂದರು. ಕೆಲ ಪಿಡಿಒ ಗಳು ಈಗಾಗಲೇ ಇರುವ ಕೊಳವೆ ಬಾವಿ ನೀರಿಲ್ಲದೆ ಬತ್ತಿಹೋಗಿದ್ದು,ಪ್ರತ್ಯೇಕ ಕೊಳವೆಬಾವಿಯ ಅವಶ್ಯಕತೆ ಇದೆ ಎಂದರು.
ಎಲ್ಲೆಲ್ಲಿ ಕೊರತೆ:
ಸಂಗಬೆಟ್ಟು ಗ್ರಾಮದ ಪುಚ್ಚೆಮೊಗರುವಿನ ಪಲ್ಗುಣಿ ನದಿ ನೀರನ್ನು ಆ ಭಾಗದಲ್ಲಿ ಕೃಷಿಗೆ ಬಳಸುತ್ತಿರುವುದರಿಂದ ನೀರಿನ ಕೊರತೆ ಇದ್ದು, ಸಂಗಬೆಟ್ಟು ಬಹುಗ್ರಾಮ ಯೋಜನೆಯಿಂದ ಕುರಿಯಾಳ,ಅಮ್ಟಾಡಿ ಭಾಗಗಳಿಗೆ ನೀರು ಪೂರೈಕೆಗೆ ಸಮಸ್ಯೆಯಾದರೆ,ಪವರ್ ಪ್ರಾಬ್ಲಂ ನಿಂದ ಕರೋಪಾಡಿ ಬಹುಗ್ರಾಮ ಯೋಜನೆಯಿಂದ ಕನ್ಯಾನ ಭಾಗಕ್ಕೆ ನೀರು ಪೂರೈಕೆ ಸಾಧ್ಯವಾಗಿಲ್ಲ ಎಂದು ಇಂಜಿನಿಯರ್ ಗಳು ಸಭೆಯ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು, ಪಶ್ಚಿಮ ವಾಹಿನಿ ಯೋಜನೆಯಡಿ ಪುಚ್ಚೆಮುಗೇರ್ ನಲ್ಲಿ ಮೂರು ಕಿಂಡಿ ಅಣೆಕಟ್ಡು ನಿರ್ಮಾಣವಾಗಲಿದ್ದು,ಮುಂದಿನ ವರ್ಷದಿಂದ ಸಂಗಬೆಟ್ಟು ಬಹುಗ್ರಾಮ ಯೋಜನೆಯಿಂದ ನೀರು ಪೂರೈಕೆಗೆ ಸಮಸ್ಯೆಯಾಗದು, ಹಾಗೆಯೇ ಕರೋಪಾಡಿ ಯೋಜನೆಗೂ ವಿದ್ಯುತ್ ಸಂಪರ್ಕದ ಸಮಸ್ಯೆ ಪರಿಹರಿಸಬೇಕು ಎಂದು ಮೆಸ್ಕಾಂ ಅಧಿಕಾರಿಗೆ ಸೂಚಿಸಿದರು. ಇಂಜಿನಿಯರ್ ಗಳು ,ಮೆಸ್ಕಾಂ ಅಧಿಕಾರಿಗಳು,ಗುತ್ತಿಗೆದಾರರು, ಪಂಚಾಯತ್ ಪಿಡಿಒ ,ಜನಪ್ರತಿನಿಧಿಗಳ ಜೊತೆಯಾಗಿ ಬಹುಗ್ರಾಮಕುಡಿಯುವ ನೀರಿನ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಯನ್ನು ಪರಿಶೀಲಿಸುವಂತೆ ಸಚಿವರು ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು,ಟ್ಯಾಂಕರ್ ಮೂಲಕ ನೀರು ಪೂರೈಕೆಯ ಅಗತ್ಯತೆ ಇರುವ ಗ್ರಾಮ ಪಂಚಾಯತ್ ಗಳು ಮೊದಲೇ ಜಿಲ್ಲಾದಿಕಾರಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಸಚಿವ ರೈ ಸೂಚಿಸಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ,ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ , ತಹಶೀಲ್ದಾರ್ ಪುರಂದರ ಹೆಗ್ಡೆ,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ನರೇಂದ್ರಬಾಬು. ಕಿರಿಯ ಇಂಜಿನಿಯರ್ ರಾದ ಕೃಷ್ಣ ಮಾನಪ್ಪ, ಅಜಿತ್ ಕೆ.ಎನ್, ರವಿಚಂದ್ರ, .ಎ.ನಾಗೇಶ್ ,ಮೆಸ್ಕಾಂನ ಇಇ ಉಮೇಶ್ಚಂದ್ರ, ಎಇಇ ನಾರಾಯಣ ಭಟ್ ಹಾಗೂ ತಾಲೂಕಿನ ಪಿಡಿಒಗಳು ಹಾಜರಿದ್ದರು.ತಾಪಂ ಇಒ ರಾಜಣ್ಣ ಸ್ವಾಗತಿಸಿ,ವಂದಿಸಿದರು.