ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ನಾನಾ ಸೌಲಭ್ಯಗಳನ್ನು ಒದಗಿಸಲು ‘ಗೆಳತಿ’ ವಿಶೇಷ ಚಿಕಿತ್ಸಾ ಘಟಕ ಬಂಟ್ವಾಳ ತಾಲೂಕಿನಲ್ಲಿ ಆರಂಭಗೊಂಡಿದೆ.
ಕೌಟಂಬಿಕ ಹಾಗೂ ವಿವಿಧ ರೀತಿಯ ದೌರ್ಜನ್ಯ ಮತ್ತು ಶೋಷಣೆಗೆ ಒಳಗಾದ ಮಹಿಳೆ ಮತ್ತು ಮಕ್ಕಳು ತಮ್ಮ ಅಹವಾಲು ನೀಡಲು ಕಚೇರಿಯಿಂದ ಕಚೇರಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ ನೊಂದವರು ಬಂದ ತಕ್ಷ ಣ ಸೂಕ್ತ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆ, ತಾತ್ಕಾಲಿಕ ಆಶ್ರಯ, ಕಾನೂನು ನೆರವು, ಪೊಲೀಸ್ ನೆರವು ಗೆಳತಿ ಯೋಜನೆಯಡಿ ಒಂದೇ ಸೂರಿನಲ್ಲಿ ದೊರೆಯುತ್ತದೆ.
ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಬುಧವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಘಟಕವನ್ನು ಉದ್ಘಾಟಿಸಿದರು.
ಆಸ್ಪತ್ರೆಯಲ್ಲಿ ಘಟಕ ಸ್ಥಾಪಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದಾದರೂ ತೀವ್ರತರದ ದೌರ್ಜನ್ಯ ಪ್ರಕರಣ ದಾಖಲಾದಲ್ಲಿ, ಸ್ಥಳೀಯ ಸಾಂತ್ವನ ಕೇಂದ್ರದ ಸಮಾಲೋಚಕರಿಂದ ಸಮಾಲೋಚನೆ ಯನ್ನು ಕೈಗೊಂಡು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಘಟಕದಲ್ಲಿ ನೀಡಲಾಗುವುದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ ಹೇಳಿದರು.
ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಮಾನಸಿಕ ಸ್ಥೈರ್ಯ ನೀಡುವ ಕೆಲಸ ಈ ಚಿಕಿತ್ಸಾ ಕೇಂದ್ರದಿಂದ ಆಗಲಿ ಎಂದು ಅವರು ಆಶಿಸಿದರು. ಈ ಸಂದರ್ಭ ಪುರಸಭಾದ್ಯಕ್ಷ ಪಿ.ರಾಮಕೃಷ್ಣ ಆಳ್ವ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ತಾಪಂ ಇಒ ರಾಜಣ್ಣ, ತಾಲೂಕು ವೈದ್ಯಾಧಿಕಾರಿ ಡಾ.ದೀಪಾ ಪ್ರಭು, ಪಬ್ಲಿಕ್ ಪ್ರಾಸಿಕ್ಯೂಟರ್ ಆಲಿ, ಸಿಡಿಪಿಒ ಮಲ್ಲಿಕಾ, ಸುಧಾ ಜೋಷಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿಗಳಾದ ಗಾಯತ್ರಿ ಕಂಬಳಿ, ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿರಿಯ ಮೇಲ್ವಿಚಾರಕಿ ಬಿ. ಭಾರತಿ ನಿರೂಪಿಸಿದರು.
IFTAAR ORGANISED BY FORMER MINISTER RAMANATHA RAI AT PANEMANGALORE (more…)