ವಾಸ್ತವ

ಕೆಸರಲ್ಲಿ ನಡೆಯೋದು, ಬಿಸಿಲಲ್ಲಿ ನಿಲ್ಲೋದು, ಅರ್ಜಿಗೆ ಕ್ಯೂ ನಿಲ್ಲೋದನ್ನು ಯಾರು ತಪ್ಪಿಸ್ತಾರೆ?

  • ಹರೀಶ ಮಾಂಬಾಡಿ

www.bantwalnews.com

ತಲೆ ತಗ್ಗಿಸಿಕೊಂಡೇ ನಡೀಬೇಕು. ನಡೆಯುವವರಿಗೆಂದು ಪ್ರತ್ಯೇಕ ವ್ಯವಸ್ಥೆ ನಿರಾಕರಿಸಲಾಗಿದೆ. ಬಸ್ ಗೆ ಕಾಯಬೇಕಿದ್ದರೆ ಬಿಸಿಲು, ಮಳೆಯಲ್ಲೇ ನಿಲ್ಲಬೇಕು, ನಿಲ್ದಾಣ ಏನಿದ್ದರೂ ಕಮರ್ಷಿಯಲ್ ಉದ್ದೇಶಗಳಿಗೆ ಮಾತ್ರ. ಸರಕಾರಿ ಕಚೇರಿಯೊಳಗೆ ಕೆಲಸವಾಗಬೇಕಿದ್ದರೆ ಯಾರನ್ನಾದರೂ ಎಡತಾಕಬೇಕು. ನೀವು ನೀವಾಗಿಯೇ ಹೋದಿರೋ ಕಾಲಲ್ಲಿ ಚಕ್ರ ಕಟ್ಟಿಕೊಂಡಂತೆ ತಿರುಗಾಡಬೇಕಷ್ಟೇ. ನಾಳೆ ಚುನಾವಣೆ ಬರುತ್ತದೆ. ನಾಡಿದ್ದು ಸನ್ಮಾನ ನಡೆಯುತ್ತದೆ. ಅದರ ಮಧ್ಯೆ ಅವರನ್ನು ಇವರು, ಇವರನ್ನು ಅವರು ಹೀಗಳೆಯುತ್ತಾರೆ, ಅವರೇನು ಮಾಡಿದರು, ನಮ್ಮವರಿಂದಲ್ಲವೇ ಆದದ್ದು ಎಂದು ಒಬ್ಬರೆಂದರೆ, ಅವರು ಆರಂಭಿಸಿದ್ದು ಮಾತ್ರ ನಾವಲ್ಲವೇ ಹಣ ಒದಗಿಸಿದ್ದು ಎಂದು ಪರಸ್ಪರ ಮೂದಲಿಸುತ್ತಾರೆ, ಕ್ಯಾಂಟೀನ್ ನಲ್ಲಿ ಚಹಾ ಕುಡಿಯುತ್ತಾ ಲೋಕೋದ್ಧಾರವಾದರೆ ನಮ್ಮವರಿಂದಲೇ ಎಂಬ ಮಾತನಾಡುತ್ತಾರೆ, ಮತ್ತದೇ ಬ್ರೋಕರ್ ಗಳ ಹುಡುಕಾಟ ಮಾಡುತ್ತಾ, ಸರಕಾರಿ ಕಚೇರಿಯಲ್ಲಿ ನಮ್ಮದೊಂದು ಕೆಲಸವಾಗಬೇಕು ಎಂದು ಹೋಗುತ್ತಾರೆ. ಜನರ ತೆರಿಗೆ ಹಣ ಒಂದಷ್ಟು ಖರ್ಚಾಗುತ್ತದೆ. ಉಳಿದದ್ದು ತ್ರಿಲೋಕಸಂಚಾರ ಮಾಡುತ್ತದೆ.

ಇದು ವಾಸ್ತವ.

ಒಂದೊಂದಾಗಿ ಸರಕಾರಿ ಕಚೇರಿಗಳನ್ನು ನೋಡುತ್ತಾ ಬನ್ನಿ. ಎಲ್ಲೆಲ್ಲಿ ಸಿಸಿ ಕ್ಯಾಮರಾ ಹಾಕಿದ್ದಾರೋ ನೋಡಿ. ಎಲ್ಲೂ ಇಲ್ಲ. ಸಾಮಾನ್ಯವಾಗಿ ಒಂದು ಖಾಸಗಿ ಕಂಪನಿಯೊಳಗೆ ನಾವು ಪ್ರವೇಶಿಸುವಂತಿಲ್ಲ. ಅಲ್ಲಿ ರಿಸೆಪ್ಶನಿಸ್ಟ್ ನಮ್ಮ ವಿಚಾರಣೆ ನಡೆಸಿ, ಯಾರು ನೀವು , ಯಾಕಾಗಿ ಬಂದಿದ್ದೀರಿ, ಯಾರನ್ನು ಭೇಟಿ ಮಾಡಬೇಕು ಎಂದು ನಮ್ಮ ಜಾತಕವನ್ನೇ ತೆಗೆಯುತ್ತಾರೆ. ಆದರೆ ಸರಕಾರಿ ಕಚೇರಿಯೊಳಗೆ ಯಾರು ಯಾವಾಗ, ಎಲ್ಲಿ ಯಾವ ರೀತಿ ಬೇಕಿದ್ದರೂ ಹೋಗಬಹುದು ಎಂಬಂತೆ ಪ್ರತಿದಿನ ಅಲ್ಲಿಗೆ ಹೋಗುವವರು ಇದ್ದಾರೆ. ನೀವು ಹಾಗೇ ಸುಮ್ಮನೆ ಅಲೆದಾಡುತ್ತಿದ್ದರೆ ನಿಮ್ಮನ್ನು ರಿಸೆಪ್ಶನ್ ವಿಚಾರಿಸುವುದಲ್ಲ, ಬ್ರೋಕರ್ ಗಳು ವಿಚಾರಿಸುತ್ತಾರೆ. ಏನು ಸ್ವಾಮಿ, ನೀವು ಇಲ್ಲಿ, ಏನಾದರೂ ಕೆಲಸವಾಗಬೇಕಾಗಿತ್ತಾ ಎಂದು ಪ್ರಶ್ನಿಸಿ, ನಿಮ್ಮ ಪೆನ್ನು, ಅರ್ಜಿಯನ್ನು ಅವರೇ ಪಡೆದು, ಮುಂದಿನ ಕೆಲಸ ಸಲೀಸು ಎಂಬಂತೆ ಮಾಡುತ್ತಾರೆ. ನಾನು ಅಧಿಕಾರಕ್ಕೆ ಬಂದರೆ ಇಂಥದ್ದನ್ನು ತಪ್ಪಿಸುತ್ತೇನೆ ಎಂದು ಘಂಟಾಘೋಷವಾಗಿ ಯಾರಿಗಾದರೂ ಹೇಳಲು ಸಾಧ್ಯವೇ? ಇಲ್ಲವೇ ಇಲ್ಲ.

ಇದು ವಾಸ್ತವ.

ಬಿ.ಸಿ.ರೋಡಿನ ಸರ್ವೀಸ್ ರಸ್ತೆಯೊಂದನ್ನೇ ನೋಡಿ. ಈಗಾಗಲೇ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಇಕ್ಕೆಲಗಳಲ್ಲಿ ಮಣ್ಣು ಹಾಕುವ ತೇಪೆ ಕೆಲಸವಷ್ಟೇ ಬಾಕಿ ಉಳಿದಿದೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ ಒಂದು ಮಳೆಗೇ ದೊಡ್ಡ ಸ್ವಿಮ್ಮಿಂಗ್ ಪೂಲ್‌ನಂಥ ಕೃತಕ ನೆರೆ ಸೃಷ್ಟಿಯಾದರೆ, ಇಡೀ ಮಳೆಗಾಲ ಹೇಗಿರಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು.

ಒಂದು ರೂಪಾಯಿಯನ್ನೂ ಲಂಚ ಕೊಡದೆ ನಮ್ಮ ಭೂದಾಖಲೆ ಸಮಸ್ಯೆ ಪರಿಹಾರವಾಗುವಂತಾದರೆ, ಪಾದಚಾರಿಗಳಿಗೂ ಗೌರವ ಕೊಟ್ಟು ರಸ್ತೆಗಳಲ್ಲಿ ಫುಟ್ ಪಾತ್ ನಿರ್ಮಿಸಿದರೆ, ಬಸ್ ನಿಲ್ದಾಣಗಳಲ್ಲಿ ಕಮರ್ಷಿಯಲ್ ಗೆ ಕನಿಷ್ಠ, ಪ್ರಯಾಣಿಕರಿಗೆ ಗರಿಷ್ಠ ಆದ್ಯತೆಯನ್ನು ನೀಡುವಂತಾದರೆ, ಎಲ್ಲರನ್ನೂ ಜಾತಿ ಆಧಾರದಲ್ಲಿ ನೋಡದೆ ಮನುಷ್ಯರು ಎಂದು ಪರಿಗಣಿಸಿದರೆ….  

ಇದು ಕನಸು.!

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts