www.bantwalnews.com Editor: Harish Mambady
ಕೆಎಂಸಿಯ ಮಾರುಕಟ್ಟೆ ಅಧಿಕಾರಿ ಪ್ರದೀಪ್ ನಾಯಕ್ ತನ್ನ ವಿವಾಹದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಮತ್ತು ನೆಬ್ಯುಲೈಸರ್‌ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
ಮಂಗಳೂರು ಕೆಎಂಸಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಯಂತ್ರವನ್ನು ಗುರುವಾರ ಚಾಲನೆಗೊಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಇಂದು ಟೆಲಿ ಮೆಡಿಸಿನ್ ನಂತಹ ತಂತ್ರಜ್ಞಾನದ ಸಂಪೂರ್ಣ ಬಳಕೆಯ ಅವಶ್ಯಕತೆ ಇದೆ.ಇದರಿಂದ ಕ್ಷಣ ಮಾತ್ರದಲ್ಲಿ ತಜ್ಞ ವೈದ್ಯರಿಂದ ಸಲಹೆ ದೊರಕಿ ಸ್ಥಳದಲ್ಲಿಯೇ ಚಿಕಿತ್ಸೆ ದೊರೆಯುವಂತಾಗುತ್ತದೆ ಎಂದು ಡಾ.ಕಾಮತ್ ಹೇಳಿದರು.
ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ ಮುಖ್ಯ ಅತಿಥಿಯಾಗಿ ಮಾತನಾಡಿ, ಆದ್ಯತೆಯ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕಾಗಿದೆ ಎಂದರು.
ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ವೈದ್ಯಾಧಿಕಾರಿ ಡಾ| ಸತೀಶ್, ಆಯುಷ್ ವೈದ್ಯ ಡಾ| ಸೋಹನ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರಾಜಶೇಖರ ಶೆಟ್ಟಿ, ಸ್ವಸ್ತಿಕ್ ಫ್ರೆಂಡ್ಸ್‌ಕ್ಲಬ್ ಕೋಶಾಧಿಕಾರಿ ರಾಜೇಶ್ ಪಿ.ಬಂಗೇರ, ಪ್ರಮುಖರಾದ ಸಂಜೀವ ನಾಯಕ್ ಮದ್ದಡ್ಕ, ಕೇಶವ ಪ್ರಭು ಗುಂಡಿದಡ್ಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರದೀಪ್ ನಾಯಕ್-ದಿವ್ಯಾದಂಪತಿ ಇಸಿಜಿ ಯಂತ್ರದ ಅರ್ಹತಾ ಪತ್ರವನ್ನು ವೈದ್ಯಾಧಿಕಾರಿಯವರಿಗೆ ಹಸ್ತಾಂತರಿಸಿದರು. ಸಿಬಂದಿ ಸಂಧ್ಯಾ ಸ್ವಾಗತಿಸಿದರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು. ತುಂಗಪ್ಪ ಬಂಗೇರ ಅವರಿಗೆ ಪ್ರಥಮ ಇಸಿಜಿ ತಪಾಸಣೆ ನಡೆಸಲಾಯಿತು.