ಬಂಟ್ವಾಳ

ಅಜಿಲಮೊಗರು-ಕಡೇಶಿವಾಲಯ ಸೌಹಾರ್ದ ಸೇತುವೆ ಕಾರ್ಯಕ್ಕೆ ಚಾಲನೆ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಅಜಿಲಮೊಗರು – ಕಡೇಶಿವಾಲಯ ಬೆಸೆಯುವ ಸೌಹಾರ್ದ ಸೇತುವೆಗೆ ಶುಕ್ರವಾರ ಭೂಮಿಪೂಜೆ ನಡೆದಿದೆ. ಕಾರ್ಯಕ್ರಮದ ಕುರಿತು ಹಾಗೂ ಸೇತುವೆ ಯಾಕಾಗಿ ಎಂಬ ವಿಚಾರದಲ್ಲಿ www.bantwalnews.com ನೀಡುತ್ತಿದೆ ಕೆಲ ಮಾಹಿತಿ.

ಜಾಹೀರಾತು

350 ಮೀಟರ್ ಉದ್ದದ ಈ ಸೇತುವೆಯನ್ನು ಕೆಆರ್ ಡಿಸಿಎಲ್ ನವರು ನಿರ್ಮಿಸುವರು.  ಧಾರ್ಮಿಕ, ಭಾವನಾತ್ಮಕ ಹಾಗೂ ಸೌಹಾರ್ದ ಹಿನ್ನೆಲೆಯಲ್ಲಿ ಈ ಸೇತುವೆ ಬೆಸೆಯುವ ಕಾರ್ಯ ಮಾಡುವುದು ಒಂದೆಡೆಯಾದರೆ, ಮತ್ತೊಂದೆಡೆ ಹಲವು ಗ್ರಾಮಗಳನ್ನು ಇದು ಸಂಪರ್ಕಿಸುತ್ತದೆ. ಮುಖ್ಯವಾಗಿ ಸರಪಾಡಿ ಭಾಗವನ್ನು ಪುತ್ತೂರು ತಾಲೂಕಿಗೆ ನಿಕಟವಾಗಿಸುವ ಅವಕಾಶ ಈ ಸೇತುವೆಗೆ ಇದೆ. ಹೀಗಾಗಿ ಅಜಿಲಮೊಗರು ಮತ್ತು ಕಡೇಶಿವಾಲಯ ಬೆಸೆಯುವ ಸೇತುವೆಗೆ ದಶಕಗಳಿಂದಲೇ ಬೇಡಿಕೆ ಇತ್ತು.

ಈ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದರೆ ರೈತರಿಗೆ ಮತ್ತು ಸ್ಥಳೀಯರಿಗೆ ಕೃಷಿ ಉತ್ಪನ್ನಗಳನ್ನು ಉಪ್ಪಿನಂಗಡಿ, ಪುತ್ತೂರು ಕಡೆಗಳಿಗೆ ಕೊಂಡೊಯ್ಯಲು ಸುಲಭವಾಗುತ್ತದೆ. ಮಣಿನಾಲ್ಕೂರು, ದೇವಸ್ಯಮುಡೂರು, ಸರಪಾಡಿ, ಕಡೇಶಿವಾಲಯದ ರೈತರಿಗೆ ಕನಿಷ್ಠ 10 ರಿಂದ 15  ಕಿಲೋಮೀಟರ್ ನಷ್ಟು ಅಂತರ ಕಡಿಮೆಯಾಗುತ್ತದೆ.

ಜಾಹೀರಾತು

ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 75 ಮತ್ತು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234 ಸಂಪರ್ಕ ಸಾಧ್ಯ. ನೀವು ಮಡಂತ್ಯಾರು ಅಥವಾ ಪುಂಜಾಲಕಟ್ಟೆ ಪರಿಸರದಿಂದ ಪುತ್ತೂರಿಗೆ ಹೋಗಬೇಕು ಎಂದಿದ್ದರೆ ಬಿ.ಸಿ.ರೋಡ್ ಗೆ ತೆರಳಿ ಮತ್ತೆ ಮಾಣಿ ಮಾರ್ಗವಾಗಿ ಹೋಗಬೇಕೆಂದೇನಿಲ್ಲ. ಅಥವಾ ಬೆಂಗಳೂರಿಗೆ ತೆರಳುವ ಸಂಪರ್ಕ ರಸ್ತೆಗೂ ಬಿ.ಸಿ.ರೋಡಿಗೆ ಬರಬೇಕೆಂದೇನಿಲ್ಲ. ನಾವುರ ಎಂಬಲ್ಲಿ ತಿರುಗಿದರೆ, ಅಲ್ಲಿಪಾದೆ ಸರಪಾಡಿ ಮೂಲಕ ಈ ಸೇತುವೆ ದಾಟಿದರೆ ನೇರವಾಗಿ ಪೆರ್ನೆ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಬಹುದು. ಹೆಚ್ಚು ಸುತ್ತಿ ಬಳಸಬೇಕೆಂದೇನಿಲ್ಲ. ಪ್ರಯಾಣದ ಅಂತರವೂ ಸುಮಾರು ೧೫ ಕಿ.ಮೀನಷ್ಟು ಕಡಿಮೆ.

ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈದ್ಯಕೀಯ ಸಂಪರ್ಕಕ್ಕಾಗಿ ಒಂದೋ ಮಂಗಳೂರು ಇಲ್ಲವೇ ಪುತ್ತೂರನ್ನು ಸಂಪರ್ಕಿಸಲಾಗುತ್ತದೆ. ಅಜಿಲಮೊಗರು ಭಾಗದ ಜನರಿಗೆ ದೊಡ್ಡ ಆಸ್ಪತ್ರೆಗಳಿಗೆ ತೆರಳಬೇಕೆಂದಿದ್ದರೆ ಬಿ.ಸಿ.ರೋಡ್ ಕಡೆಗೆ ಬರಬೇಕು. ಸೇತುವೆ ನಿರ್ಮಾಣವಾದರೆ ಪುತ್ತೂರಿಗೂ ಹೋಗುವ ಅವಕಾಶ ಇದೆ. ಇದಲ್ಲದೆ ಸಮೀಪದ ಪ್ರದೇಶಗಳಿಗೆ ತೆರಳುವವರು ಸುತ್ತು ಬಳಸಿ ಸಾಗಬೇಕಿತ್ತು. ಸೇತುವೆ ನಿರ್ಮಾಣವಾದ ಬಳಿಕ ಹತ್ತಿರದ ರಸ್ತೆಗಳೂ ಅಭಿವೃದ್ಧಿ ಹೊಂದುವುದರಿಂದ ಯಾವುದೇ ಆತಂಕವಿಲ್ಲದೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆಯೊಳಗೆ ತಲುಪಬಹುದು.

ಜಾಹೀರಾತು

ಅಜಿಲಮೊಗರು-ಕಡೇಶಿವಾಲಯ ನಡುವೆ ನೇತ್ರಾವತಿ ನದಿಗೆ ಏತುವೆ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಗೊಳಿಸಿದರೆ ಈ ಪರಿಸರವನ್ನು ರಾಷ್ಟ್ರೀಯ ಹೆದ್ದಾರಿ 75ಕ್ಕೆ ಅತೀ ಸಮೀಪದಲ್ಲಿ ಜೋಡಿಸಬಹುದು. ಧಾರ್ಮಿಕ ಹಾಗೂ ಪ್ರವಾಸೋದ್ಯಮ ನಿಟ್ಟಿನಲ್ಲೂ ಈ ಭಾಗದ ಸೇತುವೆಯನ್ನು ನಿರ್ಮಿಸುವುದು ಅತೀ ಅವಶ್ಯ. ಸರಪಾಡಿ, ಮಣಿನಾಲ್ಕೂರು ಗ್ರಾಮವೂ ಅಭಿವೃದ್ಧಿಕಕ್ಷೆಯಲ್ಲಿ ಸೇರಿಕೊಂಡಂತಾಗುತ್ತದೆ. ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಎರಡೂ ಧಾರ್ಮಿಕ ಕೇಂದ್ರಗಳ ಪರಿಸರ, ನದಿ ತೀರ ಆಹ್ಲಾದಮಯ ವಾತಾವರಣವನ್ನು ಕಲ್ಪಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಸುತ್ತಾಡುವವರಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳ ಸಂದರ್ಶಕರಿಗೆ ಈ ಸೇತುವೆ ನಿರ್ಮಾಣ ಮತ್ತಷ್ಟು ಸೌಕರ್ಯ ಒದಗಿಸಿದಂತಾಗುತ್ತದೆ.

ಭೂಮಿಪೂಜೆ:

ಸುಮಾರು 31 ಕೋಟಿ ರೂ ವೆಚ್ಚದಲ್ಲಿ ನೇತ್ರಾವತಿ ನದಿಗೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಗಳಿಗೆ ಶುಕ್ರವಾರ ಅಜಿಲಮೊಗರಿನಲ್ಲಿ ಭೂಮಿಪೂಜೆ, ಕಡೇಶಿವಾಲಯ ದೇವಸ್ಥಾನ ಮತ್ತು ಅಜಿಲಮೊಗರು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಚಿವ ಬಿ.ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು.

ಜಾಹೀರಾತು

ಪ್ರವಾಸಿಗರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪುಣ್ಯಸ್ಥಳಗಳಿಗೆ ಆಕರ್ಷಿಸುವ ನಿಟ್ಟಿನಲ್ಲಿ ಮೂರು ಯಾತ್ರಿ ನಿವಾಸಗಳು ಮಂಜೂರಾಗಿದ್ದು, ಬಂಟ್ವಾಳ ತಾಲೂಕಿನ ನಿಟಿಲಾಪುರ, ಅಜಿಲಮೊಗರು ಮತ್ತು ಕಾರಿಂಜೇಶ್ವರ ಸನ್ನಿಧಿಯಲ್ಲಿ ನಿರ್ಮಾಣವಾಗಲಿದೆ ಎಂದು ಬಿ.ರಮಾನಾಥ ರೈ ಈ ಸಂದರ್ಭ ಹೇಳಿದರು.

ತಾನು ಸುಳ್ಳು ಭರವಸೆ ನೀಡುವುದಿಲ್ಲ, ಭರವಸೆ ಕೊಟ್ಟರೆ ಅದನ್ನು ಈಡೇರಿಸುತ್ತೇನೆ ಎಂದು ಹೇಳಿದ ಸಚಿವರು, ಈ ಸೇತುವೆ ಮಾಡಿಸುವ ಬಗ್ಗೆ ದೈವಪ್ರೇರಣೆಯಂತೆ ಕೆಲಸವಾಗಿದೆ. ಸೇತುವೆ ನಿರ್ಮಾಣದಿಂದ ಎರಡೂ ಕ್ಷೇತ್ರಗಳು ಬೆಳಗಲು ಸಾಧ್ಯ. ಕಲ್ಲಡ್ಕ ಸಮೀಪ ನಿಟಿಲಾಪುರ, ಕಾರಿಂಜೇಶ್ವರ ಮತ್ತು ಅಜಿಲಮೊಗರಿನಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು. ಅಲ್ಲದೆ ಕಡೇಶಿವಾಲಯದಲ್ಲೂ ಯಾತ್ರಿ ನಿವಾಸ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ಬೆಳಗಬೇಕು, ಸೌಹಾರ್ದತೆ ಬೇಕು ಎನ್ನುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾಮರಸ್ಯ ಉಳಿಸಬೇಕು ಎಂಬ ಪ್ರತಿಜ್ಞೆ ಕೈಗೊಳ್ಳುವ ಅಗತ್ಯವಿದೆ. ಮನುಷ್ಯ ಮನುಷ್ಯನಲ್ಲಿ ಪ್ರೀತಿ, ವಿಶ್ವಾಸವನ್ನು ಮೂಡಿಸುವ ಕಾರ್ಯವಿಂದು ಆಗಬೇಕು ಎಂದು ಸಚಿವ ರೈ ಹೇಳಿದರು.

ಇದಕ್ಕೂ ಮುನ್ನ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ ಅವರು ಊರವರ ಪರವಾಗಿ ಸಚಿವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಬಿ.ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಉಪಾಧ್ಯಕ್ಷ ಬ ಬಿ.ಎಂ.ಅಬ್ಬಾಸ್ ಆಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ತಾಪಂ ಸದಸ್ಯೆ ಬೇಬಿ ಕೃಷ್ಣಪ್ಪ, ಗೇರು ಅಭಿವೃದ್ಧಿ ನಿಗಮ ನಿರ್ದೇಶಕ ಜಗದೀಶ ಕೊಲ, ಗುತ್ತಿಗೆದಾರ ಸಿ.ಎಲ್.ದತ್ತಾ, ವಿಜಯ ಬ್ಯಾಂಕ್ ಮೆನೇಜರ್ ಬೇಬಿ ಕುಂದರ್, ನೋಟರಿ ಚಿದಾನಂದ ಕಡೇಶ್ವಾಲ್ಯ, ಪ್ರಮುಖರಾದ ಸಂಪತ್‌ಕುಮಾರ್ ಶೆಟ್ಟಿ, ಈಶ್ವರ ಪೂಜಾರಿ ಕಡೇಶ್ವಾಲ್ಯ ಮತ್ತಿತರರು ಉಪಸ್ಥಿತರಿದ್ದರು. ಅಜಿಲಮೊಗರು ದರ್ಗಾ ಸಮಿತಿ ಕಾರ್ಯದರ್ಶಿ ಆದಂ ಕುಂಞ ಸ್ವಾಗತಿಸಿದರು. ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ