ಚಿತ್ರ- ವರದಿ: ಯಾದವ ಕುಲಾಲ್
ವಾಹನ ಇದ್ದವರು ಅದ್ರಲ್ಲಿ ಹೋಗ್ತಾರೆ, ಇಲ್ಲದಿದ್ದವರು ಏನು ಮಾಡ್ತಾರೆ?
ಯಾರದ್ದಾದರೂ ವಾಹನ ಸಿಗುತ್ತಾ ಅಂತ ಕಾಯ್ತಾರೆ, ಇಲ್ಲವಾದರೆ ಸರ್ವೀಸ್ ವಾಹನ ಉಂಟಾ ಎಂದು ನೋಡ್ತಾರೆ. ಯಾಕಂದರೆ ಇಲ್ಲಿ ಬಸ್ಸುಗಳೇ ಓಡಾಡುವುದಿಲ್ಲ.
ನೂರಾರು ಮನೆಗಳು, ಭಜನಾ ಮಂದಿರ, ಚರ್ಚ್, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಅಂಬೇಡ್ಕರ್ ಭವನ, ವಿದ್ಯುತ್ ಕಂಬಗಳು, ಡಾಂಬರು ಹಾಕಿದ ಅದ್ಭುತ ರಸ್ತೆ.. ಎಲ್ಲವೂ ಇಲ್ಲಿವೆ. ಆದರೆ ಓಡಾಡಲು ಸಾರ್ವಜನಿಕ ಸಾರಿಗೆಯಾದ ಬಸ್ಸೇ ಇಲ್ಲ.
ಈ ಸ್ಥಿತಿ ಇರುವುದು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ಭಾಗದಲ್ಲಿ.
ಕೆಂಪುಗುಡ್ಡೆ, ಕಾಯರ್ಮಾರ್, ಬಾಂಬಿಲ, ನಲ್ಕೆಮಾರ್, ಮಂಗ್ಲಿಮಾರ್ ಇತ್ಯಾದಿ ಊರುಗಳಿಂದ ಬಂಟ್ವಾಳ ಪೇಟೆಗೆ ಹೋಗಲು ಈ ರಸ್ತೆಯೇ ಬೇಕು.
ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣ, ಐಟಿಐ, ಡಿಪ್ಲೋಮಾಗಳಂತಹ ಕೋರ್ಸುಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಬಂಟ್ವಾಳ ಬೈಪಾಸ್ ಮಾರ್ಗವಾಗಿಯೇ ತಮ್ಮ ಕಾಲೇಜುಗಳಿಗೆ ಹೋಗಬೇಕು.
ಅಜೆಕಲ–ಕೆಂಪುಗುಡ್ಡೆ–ಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿಯಡಿ 4 ಕೋಟಿ ರೂ ಅನುದಾನದಲ್ಲಿ ಸುಸಜ್ಜಿತ ರಸ್ತೆಯಾಗಿದೆ. ನಾಮಫಲಕ ಇತ್ಯಾದಿ ಎಲ್ಲವೂ ಹಾಕಲಾಗಿದೆ.
8 ಕಿ.ಮೀ ಸಾಗಿದರೆ ಕಲ್ಪನೆ, ಅಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗ–ಮಂಗಳೂರು, ಫರಂಗಿಪೇಟೆ–ಮಂಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಪೊಳಲಿ, ಕಟೀಲು ತಲುಪಬಹುದು. ಪರ್ಯಾಯ ಮಾರ್ಗವಾಗಿ ಬಜಪೆ ವಿಮಾನ ನಿಲ್ದಾಣವನ್ನು ತಲುಪಲು ಈ ರಸ್ತೆಯನ್ನು ಬಳಸಬಹುದು. ಧರ್ಮಸ್ಥಳ, ಸರಪಾಡಿ, ವಾಮದಪದವು ಹಾಗೂ ಬಂಟ್ವಾಳದ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ರಸ್ತೆ ಅವಲಂಬಿಸಲು ಸಾಧ್ಯ.