ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ವಂಚಿತರಾದ ಬಿಜೆಪಿಯು ಅಧಿಕಾರ ಮರಳಿ ಪಡೆಯುವ ಯೋಜನೆಯ ಭಾಗವಾಗಿ ಹಿಂದೂ ಮುಸ್ಲಿಮರ ನಡುವೆ ಕೋಮು ವೈಷಮ್ಯವನ್ನು ಬಿತ್ತಿ ಅಮಾಯಕರ ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಪಿಎಫ್‌ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಆರೋಪಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಘಟಕದ ವತಿಯಿಂದ ಬಿಜೆಪಿ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ? ಎಂಬ ಘೋಷಣೆಯೊಂದಿಗೆ ಬಿಜೆಪಿಯ ವಿರುದ್ಧ ಕೈಕಂಬದ ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ದೀಪಕ್ ರಾವ್ ಕೊಲೆಯಲ್ಲಿ ಮುಸ್ಲಿಂ ಸಂಘಟನೆಗಳ ಮೇಲೆ ನೇರ ಆರೋಪ ಮಾಡುವ ಮೂಲಕ ಬಿಜೆಪಿಯು ಹತ್ಯಾ ರಾಜಕೀಯವನ್ನು ಮಾಡುತ್ತಿದೆ. ಅಮಾಯಕರ ಜೀವಗಳನ್ನು ಬಲಿಕೊಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿ ನೈಜ ಮುಖವನ್ನು ಬಯಲಿಗೆಳೆಯಲು ಪಿಎಫ್‌ಐ ವತಿಯಿಂದ “ಬಿಜೆಪಿ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ?” ಎಂಬ ಘೋಷಣೆಯೊಂದಿಗೆ ಪ್ರತಿಭಟನಾ ಸಭೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಬಾನುಚಂದ್ರ ಕೃಷ್ಣಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಿಜೆಪಿಯ ರಾಜಕೀಯವನ್ನು ಖಂಡಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಘಟಕ ಅಧ್ಯಕ್ಷ ಇಜಾಝ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಟಿಯು ಜಿಲ್ಲಾ ಸಹ ಸಂಚಾಲಕ ಯೂಸುಫ್ ಆಲಡ್ಕ, ಎಸ್‌ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್ ಮತ್ತಿತರರು ಉಪಸ್ಥಿತರಿದ್ದರು.ಪಿಎಫ್‌ಐ ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಮ್ ಕೆ. ಸ್ವಾಗತಿಸಿದರು. ಸದಸ್ಯ ಶರೀಫ್ ನಿರೂಪಿಸಿದರು.