ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಟ್ಟ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ಭದ್ರಾತಾ ಕೊಠಡಿ ಉದ್ಘಾಟನೆ ಹಾಗೂ ಸರಣಿ ಕಾರ್ಯಕ್ರಮಗಳು ಜ.25ರಿಂದ ಆರಂಭಗೊಳ್ಳಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ತಿಳಿಸಿದರು.
ಶನಿವಾರ ನಂದಾವರ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜ.25ರಂದು ಗುರುವಾರ ಬೆಳಿಗ್ಗೆ 7.30 ರಿಂದ ಶ್ರೀ ಗಣಪತಿ ಹವನದಿಂದ ಮೊದಲ್ಗೊಂಡು ಚತುರ್ವೆಧ ಪಾರಾಯಾಣ, ಗಣಪತಿ ದೇವರ ದ್ವಾರ ಬಂಧಕ್ಕೆ ಬೆಳ್ಳಿ ಕವಚ ಹಾಗೂ ಬೆಳ್ಳಿ ಕೈ ಬಟ್ಟಲಿನ ಸ್ವೀಕಾರ, ಭದ್ರತಾ ಕೊಠಡಿ ಹಾಗೂ ಬೆಳ್ಳಿ ಪಲ್ಲಕಿಗಾಗಿ ನಿರ್ಮಿಸಲಾದ ಗಾಜಿನ ಕೊಠಡಿಯ ಉದ್ಘಾಟನೆ ಹಾಗೂ ದೇವಳದ ಪರಿಚಯಾತ್ಮಕ ಕಿರು ಹೊತ್ತಗೆ ಶ್ರೀ ಕ್ಷೇತ್ರ ನಂದಾವರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಭಾಕಾರ್ಯಕ್ರಮ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಮೋಹನ್‌ರಾವ್ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭದ್ರತಾ ಕೊಠಡಿ ಉದ್ಘಾಟಿಸುವರು, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಬೆಳ್ಳಿ ಪಲ್ಲಕ್ಕಿ ಕೊಠಡಿ ಉದ್ಘಾಟಿಸುವರು ಹಾಗೂ ಪುಸ್ತಕ ಲೇಖಕ ಪ್ರೊ. ರಾಜಮಣಿ ರಾಮಕುಂಜ ಅವರಿಗೆ ಗೌರವಾರ್ಪಣೆ ನಡೆಯಲಿದೆ.
31ರಿಂದ ಫೆ.5ವರೆಗೆ ನಂದಾವರ ಜಾತ್ರೆ
ಜನವರಿ 31ರಿಂದ ಫೆ.5ರವರೆಗೆ ನಂದಾವರ ವಾರ್ಷಿಕ ಜಾತ್ರೆ ನಡೆಯಲಿದೆ. 31ರಂದು ಬುಧವಾರ ಧ್ವಜಾರೋಹಣ, 1ರಂದು ಬಯನ ಬಲಿ ಉತ್ಸವ, 2ರಂದು ನಡುಬಲಿ, ಪಾಲಕಿ ಉತ್ಸವ, ಫೆ.3ರಂದು ಮಹಾರಥೋತ್ಸವ, 4ರಂದು ಧ್ವಜಾವರೋಹಣ, 5ರಂದು ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆ ಕಾರ್ಯಕ್ರಮಗಳು ಇರಲಿವೆ ಎಂದು ಎ.ಸಿ.ಭಂಡಾರಿ ತಿಳಿಸಿದ್ದಾರೆ.
1980ರಲ್ಲಿ ನೂಯಿ ವೆಂಕಟರಾವ್ ಅವರಿಂದ ದೇವಸ್ಥಾನದ ಆಡಳಿತ ಸಮಿತಿಯ ಅಧಿಕಾರ ಹಸ್ತಾಂತರವಾದ ಬಳಿಕ 27 ವರ್ಷಗಳ 5 ಅವಧಿಗೆ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ಹಲವಾರು ಅಭಿವೃದ್ದಿ ಕಾರ್ಯಗಳು ನಡೆಸಲಾಗಿದೆ. 2005ರಲ್ಲಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ನಡೆದಿದ್ದು ಈ ಸಂದರ್ಭ ನಂದಾದೀಪ ಸಭಾಭವನ, ಸಮುದಾಯ ಗೋಪುರ, ನೇತ್ರಾವತಿ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಆ ಬಳಿಕ 7 ವರ್ಷಗಳ ಕಾಲ ಆಡಳಿತಾಧಿಕಾರಿಯ ನೇಮಕವಾಗಿ ಇದೀಗ ಮತ್ತೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷನಾಗಿ ದೇವಾಳದ ಮುಂಭಾಗ ನಾಗನ ಕಟ್ಟೆ ನಿರ್ಮಾಣ, ಕೈ ತೊಳೆಯಲು ನಳ್ಳಿ ನೀರಿನ ಸಂಪರ್ಕದ ವ್ಯವಸ್ಥೆ ಶೀಟ್ ಅಳವಡಿಕೆಯ ಕಾರ್ಯ ನಡೆಸಲಾಗಿದೆ ಎಂದರು.
ಜ್ಞಾನ ಮಂದಿರ ನಿರ್ಮಾಣ:
ದೇವಳದ ಪಕ್ಕ ಜ್ಞಾನ ಮಂದಿರ ನಿರ್ಮಿಸಲು ಉದ್ದೇಶಿಸಲಾಗಿದ್ದು ಕ್ರಿಯಾಯೋಜನೆ ಸಿದ್ದಪಡಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರ ಮುತುವರ್ಜಿಯಿಂದ ಸರಕಾರದಿಂದ ಮಂಜೂರುಗೊಂಡಿದ್ದು ಅಂದಾಜು 92 ಲಕ್ಷ ರುಪಾಯಿ ವೆಚ್ಚದಲ್ಲಿ ಜ್ಞಾನಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ. ಕಟ್ಟಡದ ಕೆಳ ಅಂತಸ್ತಿನಲ್ಲಿ ಅಪರಕ್ರಿಯೆಗೆ ಬೇಕಾದ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ ನಿರ್ಮಿಸಿ ಮೇಲ್ಭಾಗದಲ್ಲಿ ಜ್ಞಾನಮಂದಿರ ನಿರ್ಮಾಣಗೊಳ್ಳಲಿದ್ದು ಜಾತ್ರೋತ್ಸವದ ಬಳಿಕ ಕಾಮಗಾರಿ ಚಾಲನೆ ಪಡೆದುಕೊಳ್ಳಲಿದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಡಿ ಪಾಣೆಮಂಗಳೂರು ಹೊಳೆಬದಿಯಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ 6 ಕೋಟಿ ರುಪಾಯಿ ವೆಚ್ಚದ ರಸ್ತೆಯೂ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ದೇವಸ್ಥಾನನಕ್ಕೆ ಸಂಬಂಧಪಟ್ಟ ಎರಡು ದೇವರಕಟ್ಟೆಗಳ ದುರಸ್ತಿ, ರಸ್ತೆ ಡಾಮಾರೀಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ವ್ಯವಸ್ಥಾಪನ ಸಮಿತಿಯ ಎಸ್.ಗಂಗಾಧರ ಭಟ್ ಕೊಳಕೆ, ಅಣ್ಣು ನಾಯ್ಕ, ರಮಾ.ಎಸ್.ಭಂಡಾರಿ, ಮೋಹನದಾಸ ಪೂಜಾರಿ ಹಾಜರಿದ್ದರು.