ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ, ಬಂಟ್ವಾಳ, ಮೂಡುಬಿದಿರೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ ಹೇಳಿದರು.
ರಾಯಿಯಲ್ಲಿ ಸೋಮವಾರ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ಜ.೧೪ರಂದು ಆರಂಭವಾದ 13 ದಿನಗಳ ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆಯು ಎರಡನೇ ದಿನವಾದ ಸೋಮವಾರ ರಾಯಿಯಲ್ಲಿ ರಾತ್ರಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನೆಮ್ಮದಿ ಮತ್ತು ಅಭಿವೃದ್ಧಿ ಬಿಜೆಪಿ ಅಜೆಂಡಾವಾದರೆ, ಕಾಂಗ್ರೆಸ್‌ಗೆ ಅಽಕಾರದ ದಾಹ ಮಾತ್ರ, ಇವರಿಗೆ ಅಭಿವೃದ್ಧಿ ಬೇಕಿಲ್ಲ ಎಂದರು. ಕಾಂಗ್ರೆಸ್ ಮುಕ್ತ ಕರ್ನಾಟಕವಾಗಬೇಕಾದರೆ ಬಂಟ್ವಾಳ, ಮೂಡಬಿದಿರೆಯಲ್ಲೂ ಕಾಂಗ್ರೆಸ್ ಮುಕ್ತವಾಗಬೇಕು, ಇದಕ್ಕೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದ ಅವರು ಉಳಿಪ್ಪಾಡಿ ಮತ್ತು ಬೆಳ್ಳಿಪ್ಪಾಡಿಯ ಮಧ್ಯೆ ಸ್ಪರ್ಧೆಯಲ್ಲಿ ಈ ಬಾರಿ ಉಳಿಪ್ಪಾಡಿಗೆ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ವಿಕಾಸ, ನಂಬಿಕೆ, ಪ್ರಾಮಾಣೆಕತೆಗೆ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ವಿಶ್ವ ಗುರುವನ್ನಾಗಿ ನಿರ್ಮಿಸುವ ಅವರ ಕನಸಿಗೆ ಎಲ್ಲಾ ಭಾರತೀಯರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟಿರುವ ಜನಾರ್ದನ ಪೂಜಾರಿಯವರ ಆರೋಗ್ಯವನ್ನು ಕಾಂಗ್ರೆಸ್ ನಾಯಕರು ವಿಚಾರಿಸಲಿಲ್ಲ ,ಆದರೆ ಬಿಜೆಪಿ ನಾಯಕರು ಅವರ ಆರೋಗ್ಯ ಸುಧಾರಣೆಗೆ ಪ್ರಾರ್ಥನೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಮಾತನಾಡಿ, ಕಳೆದ ಮೂರೂವರೆ ವರ್ಷದಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಅಭೂತಪೂರ್ವವಾದ ಬದಲಾವಣೆಯಾಗುತ್ತಿದ್ದು, ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಾನು ಸೋತರೂ ಸಿಕ್ಕಿರುವ ಜನಬೆಂಬಲ ತನಗೆ ಸಂತಸವನ್ನು ತಂದಿದೆ. ಕ್ಷೇತ್ರದ ಪರಿವರ್ತನೆಗಾಗಿ ಈ ಪಾದಯಾತ್ರೆಯನ್ನು ನಡೆಸಲಾಗುತ್ತಿದ್ದು ಕಾರ್ಯಕರ್ತರಿಂದ ಹಾಗೂ ಪಕ್ಷದ ಹಿತೈಷಿಗಳಂದ ವ್ಯಾಪಕವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.ರಾಜ್ಯದಲ್ಲಿ ಸಿದ್ದರಾಮ್ಯ ಸರಕಾರ ಮೂಢನಂಬಿಕೆಯ ಹೆಸರಿನಲ್ಲಿ ಮೂಲ ನಂಬಿಕೆಗೆ ಹೊಡೆತ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಅವರು ನಮ್ಮ ಸಂಸ್ಕೃತಿಯ ಮೇಲೆ ಅಪಚಾರ ಎಸಗುತ್ತಿದ್ದು, ಜಾತಿ, ಧರ್ಮದ ನಡುವೆ ಕಂದಕವನ್ನು ಸೃಷ್ಠಿಸಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಈಗಾಗಲೇ ಆರಂಭವಾಗಿದ್ದು, ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ , ಮೋನಪ್ಪ ದೇವಸ್ಯ, ಮಾಜಿ ತಾ.ಪಂ. ಸದಸ್ಯರಾದ ರತ್ನಕುಮಾರ್ ಚೌಟ, ವಸಂತ ಅಣ್ಣಳಿಕೆ, ಜಿಲ್ಲಾ ಎಸ್ ಸಿ ಮೋರ್ಛಾ ಅಧ್ಯಕ್ಷ ದಿನೇಶ್ ಅಮ್ಟೂರು,ಯುವ ಮೋರ್ಛಾ ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ರಾಯಿಬೆಟ್ಟು, ಪ್ರಮುಖರಾದ ತುಂಗಮ್ಮ, ನಂದ ಕಿಶೋರ್, ರಾಜರಾಮ ನಾಯಕ್, ಪುರುಷೋತ್ತಮ ಶೆಟ್ಟಿ, ಹರೀಶ್ ಆಚಾರ್ಯ, ಗಣೇಶ್ ರೈ, ಸೀತಾರಾಮ ಪೂಜಾರಿ, ಪರಮೇಶ್ವರ ರಾಯಿ, ರಮಾನಾಥ ರಾಯಿ, ಪುಷ್ಪಲತಾ, ರಶ್ಮಿತ್ ಕೈತ್ರೋಡಿ, ರೊನಾಲ್ಡ್ ಡಿಸೋಜಾ, ಮಧುಕರ ಬಂಗೇರ, ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ರಾಯಿಕೊಯಿಲ ಅರಳ ಹಿಂದೂ ಧರ್ಮೊತ್ಥಾನ ಟ್ರಸ್ಟ್ ಗೌರವಾಧ್ಯಕ್ಷ ದೇವಪ್ಪ ಶೆಟ್ಟಿ ಮಾವಂತೂರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅರಳ ಗ್ರಾ.ಪಂ. ಸದಸ್ಯ ಡೋಂಬಯ್ಯ ಅರಳ ಸ್ವಾಗತಿಸಿ, ನಿರೂಪಿಸಿದರು.