28ರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೂ ಬರೋದಿಲ್ಲ ಎಂದ ಅಂಗನವಾಡಿ ಕಾರ್ಯಕರ್ತೆಯರು
ಬಂಟ್ವಾಳ ಹಾಗೂ ವಿಟ್ಲ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿರ ಮೂರು ತಿಂಗಳ ವೇತನ ಪಾವತಿಗೆ ಒತ್ತಾಯಿಸಿ ಜ. 25ರಂದು ತಾಲೂಕಿನ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಧರಣಿ ನಡೆಸಲಾಗುವುದು ಎಂದು ಬಂಟ್ವಾಳ ಅಂಗನವಾಡಿ ಕಾರ್ಯಕರ್ತೆಯರ ಸಂಘದ ನಿರ್ದೇಶಕಿ ಉಷಾ ಎಂ. ಹೇಳಿದ್ದಾರೆ.
ಶನಿವಾರ ಸಂಜೆ ಬಂಟ್ವಾಳ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳ ಹಾಗೂ ವಿಟ್ಲ ಶಾಖೆಯಲ್ಲಿ ಸುಮಾರು 1141 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಪ ವೇತನದಲ್ಲಿ ಇಲಾಖೆಯ ಕೆಲಸ ಕಾರ್ಯಗಳಲ್ಲದೆ ಇತರ ಕೆಲಸಗಳನ್ನು ಕೂಡಾ ಮಾಡಿಸಲಾಗುತ್ತಿದೆ. ಆದರೆ ಕಳೆದ ಅಕ್ಟೋಬರ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಕಾರ್ಯಕ್ರಮವಾಗಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಂಪೂರ್ಣ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ವೇತನ ಪಾವತಿಯಾದ ಹಿನ್ನೆಲೆಯಲ್ಲಿ ಜ. 28ರಂದು ನಡೆಯುವ ಪಲ್ಸ್ ಪೋಲಿಯೋ ಲಸಿಕಾ ವಿತರಣಾ ಕಾರ್ಯಕ್ರಮದ ಕರ್ತವ್ಯಕ್ಕೆ ಹಾಜರುಗುವುದಿಲ್ಲ. ಈ ಬಗ್ಗೆ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಯವರಿಗೂ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ಜ. 18ರಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಕೈಗೆ ಕಪ್ಪು ಪಟ್ಟಿ ಧರಿಸಿ ಅರ್ಧ ದಿನ ಮಾತ್ರ ಕೇಂದ್ರ ತೆರೆದು ಕರ್ತವ್ಯ ನಿರ್ವಹಿಸಲು ನಿರ್ಧರಿಸಿದ್ದು, ವೇತನ ಪಾವತಿಯಾಗುವರೆಗೂ ಈ ಹೋರಾಟವನ್ನು ಮುಂದುವರಿಸಲಾಗುವುದು. “ವೇತನವಿಲ್ಲದ ವೇತನ ಸಭೆ ಬೇಡ” ಎಂಬ ಘೋಷಣೆಯೊಂದಿಗೆ ವೇತನ ಸಭೆಯನ್ನೂ ಕೂಡಾ ಬಹಿಷ್ಕರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರೇಣುಕಾ ಪೊಳಲಿ, ಉಮಾವತಿ ಬಾಳ್ತಿಲ, ಭಾರತಿ, ಜಯಶ್ರೀ, ಚಂದ್ರಕಲಾ, ರೇಖಾ ಇರಾ ಮತ್ತಿತರರು ಇದ್ದರು.