ಯಾವುದೇ ಕಲೆ ಇರಲಿ, ಅದನ್ನು ಆರಾಧಿಸಿದರೆ ಮಾತ್ರ ಸಿದ್ಧಿಸುತ್ತದೆ ಎಂದು ಖ್ಯಾತ ಭಾಗವತ, ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಹೇಳಿದರು.
ಬಂಟ್ವಾಳ ತಾಲೂಕಿನ ನರಿಕೊಂಬು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆಯ ಕಲಾರಾಧನೆ ಪ್ರಯುಕ್ತ ಯಕ್ಷಾರಾಧನೆ ಕಾರ್ಯಕ್ರಮವನ್ನು ಶ್ರೀ ಕೋದಂಡರಾಮ ಭಜನಾ ಮಂದಿರ ವಠಾರದಲ್ಲಿ ಉದ್ಘಾಟಿಸಿ, ತನ್ನ ಹಿಮ್ಮೇಳ ಗುರುವೂ ಆಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಚೆಂಡೆ, ಮದ್ದಳೆ ಬಾರಿಸುವುದಲ್ಲ, ನುಡಿಸಲು ಗೊತ್ತಿರಬೇಕು, ಕಲೆಯನ್ನು ಆರಾಧಿಸಬೇಕು ಎಂದು ನನಗೆ ಹೇಳಿದವರು ಮಾಂಬಾಡಿ ಗುರುಗಳು, ಭಾಗವತ ಎಂಬ ಶಬ್ದಕ್ಕೆ ನಿಜವಾದ ಅರ್ಥ ಬರುವಂತೆ ಅಭ್ಯಸಿಸಬೇಕು ಎಂದರು.
ತನ್ನ ಯಕ್ಷಗಾನ ಕಲಿಕಾ ಹಾದಿಯನ್ನು ವಿವರಿಸಿದ ಅವರು, ಶ್ರದ್ಧೆಯಿಂದ ಕಲಿತರೆ ಅಭಿವೃದ್ಧಿ ಸಾಧ್ಯ, ಇಂದು ಯಕ್ಷಗಾನ ಕಲಾವಿದರಿಗೆ ಮನ್ನಣೆ ಸಿಗಲು ಉತ್ತಮ ಗುರುಗಳ ಅಗತ್ಯವೂ ಇದೆ ಎಂದರು.
ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಮಾತನಾಡಿ, ಕರಾವಳಿಯಲ್ಲಿ ಜನ್ಮ ತಾಳಿದ ಕರ್ಣಾಟಕ ಬ್ಯಾಂಕ್, ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದರು.
ಶ್ರೀ ಕೋದಂಡರಾಮ ಭಜನಾ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ರವಿವರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಮತ್ತು ಪೊಳಲಿ ವೆಂಕಪ್ಪಯ್ಯ ಭಟ್ ಈ ಸಂದರ್ಭ ಉಪಸ್ಥಿತರಿದ್ದರು. ಕೃಷ್ಣರಾಜ ಭಟ್ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಇದೇ ವೇಳೆ ಯುವ ಪ್ರತಿಭೆ ಚಿನ್ಮಯ ಭಟ್ ಅವರನ್ನು ಗೌರವಿಸಲಾಯಿತು. ಭೋಪಾಲ್ ನಲ್ಲಿ ನಡೆದ ಕಲೋತ್ಸವದಲ್ಲಿ ರಾಷ್ಟ್ರಮಟ್ಟದ ಪುರಸ್ಕಾರ ಪಡೆದ ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆಯ ಮಕ್ಕಳ ಹೆತ್ತವರನ್ನು ಹಾಗೂ ಅಧ್ಯಾಪಕರನ್ನು ಅಭಿನಂದಿಸಲಾಯಿತು. ಬಳಿಕ ಶ್ರೀವತ್ಸ ಎಸ್.ಆರ್. ನಿರ್ದೇಶನದಲ್ಲಿ ಸೀತಾ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.