ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಹುಟ್ಟೂರಾದ ಬಂಟ್ವಾಳದಲ್ಲಿ ಬಡವರ ಮಕ್ಕಳಿಗೂ ಸಂಸ್ಕಾರಯುತ ಹಾಗೂ ವಿಶಿಷ್ಟ ಗುಣಮಟ್ಟದ ಉಚಿತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಾಲೆ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲಿಯೇ ಚಾಲನೆ ಪಡೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಭಕ್ತಾದಿಗಳು ಸಹಕರಿಸುವಂತೆ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಬಂಟ್ವಾಳ ಇದರ ಅಧ್ಯಕ್ಷ ಸಂಜೀವ ಪೂಜಾರಿ ಮನವಿ ಮಾಡಿದರು.
ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಗುರುವಂದನಾ ಕಾರ್ಯಕ್ರಮ ಹಾಗೂ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಪ್ರಯುಕ್ತ ಮೆಲ್ಕಾರಿನ ಬಿರ್ವ ಸೆಂಟರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸ್ವಾಮೀಜಿಗಳ ಆಶಯದಂತೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಉಪಸಮಿತಿ ರಚಿಸಲಾಗುತ್ತಿದೆ. ಈ ಎಲ್ಲಾ ಉಪಸಮಿತಿಗಳು ಸೇರಿಕೊಂಡು ಗುರುವಂದನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡಬೇಕೆಂದು ವಿನಂತಿಸಿದರು.
ವೇದಿಕೆಯಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ, ಬಂಟ್ವಾಳ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪುರಷೋತ್ತಮ ಸಾಲ್ಯಾನ್ ನರಿಕೊಂಬು, ವಿವಿಧ ಸಮಿತಿ ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ವಿಶ್ವನಾಥ ಪೂಜಾರಿ, ಬಿ. ಮೋಹನ್, ರಾಮದಾಸ ಬಂಟ್ವಾಳ, ಗೋಪಾಲ ಸುವರ್ಣ, ಬೇಬಿ ಕುಂದರ್, ರಾಜೇಶ್ ಮತ್ತಿತರರು ಹಾಜರಿದ್ದರು. ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.