ನಾಟಕ ಮುಗೀತು. ಇನ್ನು ಯಕ್ಷಗಾನಕ್ಕೆ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಸಜ್ಜಾಗುತ್ತಿದೆ. ಮಂಚಿ ಕುಕ್ಕಾಜೆಯ ವಿನಾಯಕ ಭಜನಾ ಮಂದಿರದಲ್ಲಿ 31ರಂದು ಬೆಳಗ್ಗೆ 9.30ರಿಂದ ಸಂಜೆ 7 ಗಂಟೆವರೆಗೆ ಯಕ್ಷೋತ್ಸವ ರಂಗಭೂಮಿಕಾ 2017. ಇದು ಈ ವರ್ಷದ ಕೊನೆಯ ಕಾರ್ಯಕ್ರಮವೂ ಹೌದು. ವಿರಾಮದ ದಿನವೆಂದೇ ಹೇಳಲಾದ ಭಾನುವಾರವೂ ಹೌದು. ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ದಶಮಾನೋತ್ಸವ ಸಂಭ್ರಮವಾಗಿ ಬಿ.ವಿ.ಕಾರಂತ ನೆನಪಿನ ಅಂತರಕಾಲೇಜು ನಾಟಕ ಮತ್ತು ಯಕ್ಷಗಾನ ಸ್ಪರ್ಧೆಗಳ ಒಂದು ಭಾಗ ಮುಗಿದಿದೆ.
ಹೇಗಿತ್ತು ನಾಟಕ?
ಮಂಗಳೂರು ಪದುವಾ ಕಾಲೇಜು ವಿದ್ಯಾರ್ಥಿಗಳ ಮದರ್ ಕರೇಜ್ ನಾಟಕ ಪ್ರಥಮ ಬಹುಮಾನ ಗಳಿಸಿತು. ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿಗಳ ಮಾರಿಕಾಡು ದ್ವಿತೀಯ ಸ್ಥಾನ, ಮಂಗಳೂರು ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ಅಗ್ನಿವರ್ಣ ನಾಟಕ ತೃತೀಯ ಸ್ಥಾನ ಪಡೆದುಕೊಂಡಿತು.
ಜಗತ್ತಿನಲ್ಲಿ ನಡೆಯುವ ಯುದ್ಧಗಳು ಜನ ಜೀವನದ ಮೇಲೆ ಬೀರುವ ಪರಿಣಾಮ, ಮೌಲ್ಯಗಳ ಅಧ:ಪತನ, ಯುದ್ಧ ತಡೆಯಲು ಮಾಡುವ ಪ್ರಯತ್ನ ಸಾರುವ ಬೆಕ್ಟ್ ಕಥೆ ಆಧರಿತ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮದರ್ ಕರೇಜ್ (ನಿರ್ದೇಶನ- ನೀನಾಸಂ ಸತೀಶ್) ನಾಟಕವನ್ನು ಅಭಿನಯಿಸಿದವರು ಮಂಗಳೂರಿನ ಪದುವ ಕಾಲೇಜು ವಿದ್ಯಾರ್ಥಿಗಳು.
ಡಾ. ಕಂಬಾರರ ಮಾರಿಕಾಡು ಮ್ಯಾಕ್ ಬೆತ್ ಕಥೆ. ಶಿವಶಂಕರ್ ನೀನಾಸಂ ನಿರ್ದೇಶನದಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜು ವಿದ್ಯಾರ್ಥಿಗಳು ಆಡಿ ತೋರಿಸಿದರು. ರಘುವಂಶದ ಕೊನೆಯ ರಾಜ ಅಗ್ನಿವರ್ಣ ಸಾಧನೆಯಿಲ್ಲದೆ, ಭೋದನೆಯನ್ನು ಕೇಳದೆ ಹೆಂಡ – ಹೆಣ್ಣಿನ ವ್ಯಾಮೋಹದಿಂದ ತನ್ನನ್ನು ತಾನು ಮರೆತು ತನ್ನಿಂದಲೇ ಅಧಃಪತನಗೊಳ್ಳುವ ದುರಂತ ಕತೆ ಅಗ್ನಿವರ್ಣ. ಆದುನಿಕ ಬದುಕಿನ ವಿಲಾಸೀ ಜೀವನದ ಅಂತ್ಯಕ್ಕೆ ನಿದರ್ಶನ ಎಂಬುದನ್ನು ಎಚ್ ಎಸ್ ವೆಂಕಟೇಶಮೂರ್ತಿಯವರ ರಚನೆಯನ್ನು ಭವ್ಯ ಶೆಟ್ಟಿ ನಿರ್ದೇಶನದಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಜಾಗತೀಕರಣದಿಂದ ಸಂಸ್ಕೃತಿಯ ಮೇಲಿನ ಆಕ್ರಮಣವನ್ನು ಕಾಡು ಪ್ರಾಣಿಗಳ ಮೂಲಕ ತೋರಿಸುವ ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ಕುಣಿ ಕುಣಿ ನವಿಲೆಯನ್ನು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪ್ರಾಕೃತಿಕ ಆಗುಹೋಗುಗಳನ್ನು ತೋರಿಸುವ ಮುರಳಿ ಶೃಂಗೇರಿ ಅವರ ಕರುಣಾನಿಧಿ ನಾಟಕವನ್ನು ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಸಹ ನಿರ್ವಾಹಕರಾಗಿ ಬಂಟ್ವಾಳ ಎಸ್ ವಿಎಸ್ ಕಾಲೇಜು ವಿದ್ಯಾರ್ಥಿಗಳ ತಂಡ ನಾಟಕ ಮಾಡಿದರು. ಈ ಎರಡೂ ನಾಟಕಗಳನ್ನು ಪತ್ರಕರ್ತ, ರಂಗಕಲಾವಿದ ಮೌನೇಶ್ ವಿಶ್ವಕರ್ಮ ನಿರ್ದೇಶನ ಮಾಡಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಹಿಂದೆ ಹಾಗೂ ಇಂದಿನ ಚಿತ್ರಣವನ್ನು ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ನಿನಗೆ ನೀನೇ ಗೆಳತಿಯನ್ನು ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜು ವಿದ್ಯಾರ್ಥಿಗಳು ಡಾ. ಬಿ ಎಂ ಶರಭೇಂದ್ರ ಸ್ವಾಮಿ ನಿರ್ದೇಶದಲ್ಲಿ ಮಾಡಿದರು.
ಸಭಾ ಕಾರ್ಯಕ್ರಮ
ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಕಳೆದ ವಾರ ನಾಟಕ ಸ್ಪರ್ಧೆ ಅಂತರ್ ಕಾಲೇಜು ಮಟ್ಟದಲ್ಲಿ ನಡೆದವು. ಸಮಾರೋಪ ಭಾಷಣವನ್ನು ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಮಾಡಿದರು. ಬಿ ವಿ ಕಾರಂತರ ಬಾಲ್ಯದ ಒಡನಾಡಿ ಡಾ. ಕಜೆ ಮಹಾಬಲ ಭಟ್ ಕಾರಂತರನ್ನು ನೆನಪಿಸಿಕೊಂಡರು.
ತೀರ್ಪುಗಾರ, ರಂಗವಿಮರ್ಶಕ ಪ್ರಭಾಕರ ತುಮರಿ ಮಾತಿನಲ್ಲೂ ನಾಟಕಗಳ ಮೌಲ್ಯಮಾಪನ ಮಾಡಿದರು. ವಿಟ್ಲ ವಿಟ್ಠಲ ವಿದ್ಯಾ ಸಂಘದ ಸಂಚಾಲಕ ಎಲ್.ಎನ್.ಕೂಡೂರು, ರಂಗಭೂಮಿಕಾ ಸಂಚಾಲಕ ಎಂ.ಅನಂತಕೃಷ್ಣ ಹೆಬ್ಬಾರ್ ವಿಟ್ಲ, ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್, ವಿಟ್ಲ ರೋಟರಿ ಅಧ್ಯಕ್ಷ ಎಂ.ಸಂಜೀವ ಪೂಜಾರಿ, ವಿಟ್ಲ ಜೆಸಿಐ ಅಧ್ಯಕ್ಷ ಸೋಮಶೇಖರ್, ಶ್ರವಣ್ ಜ್ಯುವೆಲ್ಲರ್‍ಸ್ ಮಾಲಕ ಸದಾಶಿವ ಆಚಾರ್ಯ ಕೆ, ಹಸನ್ ವಿಟ್ಲ, ವಿಟ್ಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಎ.ಎಸ್.ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ಉಪಸ್ಥಿತರಿದ್ದರು.
ಉದ್ಯಮಿ ಸುಬ್ರಾಯ ಪೈ ಸ್ವಾಗತಿಸಿದರು. ಅರವಿಂದ ಕುಡ್ಲ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
earlier news: